ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇಂದು 43ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇದರ ಅಂಗವಾಗಿ ಅವರ ಅಭಿಮಾನಿಗಳ ಅತ್ಯಂತ, ಸಡಗರ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಲು ಸಜ್ಜಾಗಿದ್ದು, ಈ ಮಧ್ಯೆ ಆಂಧ್ರಪ್ರದೇಶದ ನಂದಿಗ್ರಾಮದ ತೆಲುಗು ಅಭಿಮಾನಿಗಳು ಈ ಬಾರಿ ಧೋನಿಯ 100 ಅಡಿ ಕಟೌಟ್ ನಿಲ್ಲಿಸುವ ಮೂಲಕ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ. ಕಳೆದ ಬಾರಿ 77 ಅಡಿ ಕಟೌಟ್ ನಿಲ್ಲಿಸಿದ್ದ ಅಭಿಮಾನಿಗಳು ಈ ಬಾರಿ 100 ಅಡಿ ಕಟೌಟ್ ನಿಲ್ಲಿಸುವ ಮೂಲಕ ವಿಶೇಷ ಅಭಿಮಾನ ಮೆರೆದಿದ್ದಾರೆ.
ರಾಂಚಿಯಲ್ಲಿ ಜನಿಸಿದ ‘ಮಹಿ’ ಭಾರತೀಯ ಕ್ರಿಕೆಟ್ಗೆ ಹಲವು ಶ್ರೇಷ್ಠ ಗೆಲುವನ್ನು ತಂದುಕೊಟ್ಟಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ ತಂಡ T20 ವಿಶ್ವಕಪ್, ODI ವಿಶ್ವಕಪ್, ICC ಚಾಂಪಿಯನ್ಸ್ ಟ್ರೋಫಿ ಮತ್ತು ಟೆಸ್ಟ್ನಲ್ಲಿ ನಂಬರ್ 1 ಸ್ಥಾನ ಪಡೆದಿತ್ತು. ಐಪಿಎಲ್ನಲ್ಲೂ ‘ಮಹಿ’ ಮಿಂಚಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ಗೆ 5 ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಟ್ಟ ಧೋನಿ, ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದಾರೆ.
90 ಟೆಸ್ಟ್, 350 ಏಕದಿನ, ಮತ್ತು 98 ಟಿ20 ಪಂದ್ಯಗಳನ್ನು ಆಡಿರುವ ಧೋನಿ, ಪ್ರತಿಯೊಂದು ಮಾದರಿಯಲ್ಲೂ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಟೆಸ್ಟ್ನಲ್ಲಿ 4,876 ರನ್, ಏಕದಿನದಲ್ಲಿ 10,773 ಮತ್ತು ಟಿ20ಯಲ್ಲಿ 1,617 ರನ್ ಗಳಿಸಿರುವ ಧೋನಿ ಅದ್ಭುತ ಬ್ಯಾಟ್ಸ್ಮನ್ ಆಗಿದ್ದಾರೆ. 264 ಐಪಿಎಲ್ ಪಂದ್ಯಗಳಲ್ಲಿ 5,243 ರನ್ ಗಳಿಸಿರುವ ಧೋನಿ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.