ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿರುವ ರೈಲುನಿಲ್ದಾಣಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು. ಜಿಲ್ಲಾ ಕೇಂದ್ರಗಳಲ್ಲಿರುವ ನಿಲ್ದಾಣಗಳಂತೆ ತಾಲೂಕು ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಿ ಅಗತ್ಯ ಮೂಲಸೌಕರ್ಯ ಒದಗಿಸಲು ಒತ್ತು ನೀಡಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಆಧುನೀಕರಣಗೊಂಡಿರುವ 7 ನಿಲ್ದಾಣ ಹೊರತುಪಡಿಸಿ ಉಳಿದ ಎಲ್ಲ ತಾಲೂಕು ಕೇಂದ್ರಗಳಲ್ಲಿನ ರೈಲುನಿಲ್ದಾಣಗಳ ಆಧುನೀಕರಣ, ಟಿಕೆಟ್ ನೀಡುವ ವ್ಯವಸ್ಥೆ, ವಿಶ್ರಾಂತಿ ಕೊಠಡಿ ಹಾಗೂ ಪ್ರಯಾಣಿಕರಿಗೆ ರೈಲು ಬಾರದೆ ಸಮಸ್ಯೆ ಉಂಟಾದಾಗ ಆ ಸಮಸ್ಯೆ ಬಗೆಹರಿಸಲು ಸಹ ವ್ಯವಸ್ಥೆ ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ತುಮಕೂರು- ರಾಯದುರ್ಗ, ತುಮಕೂರು- ದಾವಣಗೆರೆ ರೈಲ್ವೆ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು 600 ಕೋಟಿ ರೂ. ವೆಚ್ಚ ಮಾಡಲಿದ್ದು, 2026ರ ಡಿಸೆಂಬರ್ ಅಂತ್ಯದೊಳಗೆ ಲೋಕಾರ್ಪಣೆ ಮಾಡಲಾಗುವುದು. ಈ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಮಧುಗಿರಿ ಮತ್ತು ಕೊರಟಗೆರೆ ಭಾಗದಲ್ಲಿ ಇನ್ನು 65 ಎಕರೆ ಮಾತ್ರ ಭೂಸ್ವಾಧೀನ ಆಗಬೇಕಿದೆ. ಹಾಗೆಯೇ ದಾವಣಗೆರೆಯಲ್ಲಿ 15 ಎಕರೆ ಹೊರತುಪಡಿಸಿ ಉಳಿದ ಎಲ್ಲ ಭೂಮಿ ಸ್ವಾಧೀನವಾಗಿದೆ. ರಾಜ್ಯ ಸೇರಿ ದೇಶಾದ್ಯಂತ ನನೆಗುದಿಗೆ ಬಿದ್ದಿರುವ ರೈಲ್ವೆ ಕೆಳಸೇತುವೆ, ಮೇಲ್ಸೇತುವೆ ಕಾಮಗಾರಿಗಳನ್ನು ತ್ವರಿತಗೊಳಿಸಲು ಕ್ರಮವಹಿಸಲಾಗುವುದು ಎಂದರು.