ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಸಿಕಂದ್ರ ರಾವು ಪ್ರದೇಶದಲ್ಲಿ ಜುಲೈ 2ರಂದು ನಡೆದ ಕಾಲ್ತುಳಿತ ಅವಘಡಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆರು ಮಂದಿ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಆದರೆ, ಸ್ವಯಂಘೋಷಿತ ದೇವಮಾನವನ ಮೇಲೆ ಯಾವುದೇ ಆರೋಪ ಹೊರಿಸಿಲ್ಲ ಎಂದು ವರದಿಯಾಗಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿ 121 ಜನರು ಸಾವನ್ನಪ್ಪಿದ್ದರು. ಈ ಕುರಿತು ತನಿಖೆ ನಡೆಸಲು ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಎಸ್ಐಟಿ ರಚಿಸಿತ್ತು. ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಒಪ್ಪಿಸಿರುವ ಎಸ್ಐಟಿ, ‘ಜನಸಂದಣಿಯೇ ಅವಘಡಕ್ಕೆ ಮುಖ್ಯ ಕಾರಣ’ ಎಂದಿದೆ. ಅಲ್ಲದೆ, ಅಧಿಕಾರಿಗಳು, ಪೊಲೀಸರು ಮತ್ತು ಕಾರ್ಯಕ್ರಮದ ಸಂಘಟಕರ ವಿರುದ್ದ ನಿರ್ಲಕ್ಷ್ಯದ ಆರೋಪ ಹೊರಿಸಿದೆ. ವರದಿಗಳ ಪ್ರಕಾರ, ಕಾರ್ಯಕ್ರಮದ ಮುಖ್ಯ ಆಯೋಜಕ ಅಥವಾ ಕೇಂದ್ರ ಬಿಂದು ಸ್ವಯಂಘೋಷಿತ ದೇವಮಾನವ ಸೂರಜ್ಪಾಲ್ ಸಿಂಗ್ ಅಲಿಯಾಸ್ ‘ಭೋಲೆ ಬಾಬಾ’ ಗೆ ಎಸ್ಐಟಿ ಕ್ಲೀನ್ ಚಿಟ್ ನೀಡಿದೆ.
ಹೆಚ್ಚಾಗಿ ಸ್ವಯಂ ಸೇವಕರನ್ನು ಬಂಧಿಸಲಾಗಿದೆ. “ಎಸ್ಐಟಿ ಸಂದರ್ಶಿಸಿರುವ ಹಲವಾರು ಜನರು ಭೋಲೆ ಬಾಬಾ ಅವರನ್ನು ದೂಷಿಸಿದ್ದಾರೆ. ಆದರೆ, ಅವರನ್ನು ಎಫ್ಐಆರ್ ಅಥವಾ ಎಸ್ಐಟಿ ವರದಿಯಲ್ಲಿ ಆರೋಪಿ ಎಂದು ಹೆಸರಿಸಲಾಗಿಲ್ಲ” ಎಂದು ಅಮಾನತುಗೊಂಡ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮತ್ತೊಬ್ಬ ಹಿರಿಯ ಅಧಿಕಾರಿ, “ದಲಿತ ಸಮುದಾಯದಲ್ಲಿ ಭೋಲೆ ಬಾಬಾ ಭಾರೀ ಪ್ರಭಾವ ಹೊಂದಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಆತಂಕವಿರಬಹುದು. ಅಲ್ಲದೆ, ಬಾಬಾ ವಿರುದ್ಧದ ಕ್ರಮವು ಅಶಾಂತಿಯನ್ನು ಉಂಟು ಮಾಡಬಹುದು. ಹಾಗಾಗಿ, ಅವರ ವಿರುದ್ದ ಕ್ರಮ ಕೈಗೊಂಡಿಲ್ಲ ಎಂದು ತೋರುತ್ತದೆ” ಎಂಬುದಾಗಿ ಹೇಳಿದ್ದಾರೆ.
ಭೋಲೆ ಬಾಬಾ ಪರ ವಕೀಲ ಎ ಪಿ ಸಿಂಗ್, ಬಾಬಾ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳನ್ನು ನಿರಾಕರಿಸಿದ್ದು, “ಅವರು ತಲೆಮರೆಸಿಕೊಂಡಿಲ್ಲ. ಕಾನೂನಿನ ಮೇಲೆ ನಂಬಿಕೆ ಮತ್ತು ಗೌರವ ಅವರಿಗಿದೆ. ಪೊಲೀಸರ ನಿರ್ದೇಶನಗಳನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.