ಕಳೆದ ಮೂರ್ನಾಲ್ಕು ದಶಕಗಳಿಂದ ಕನ್ನಡ ಮನಸ್ಸುಗಳಿಗೆ ತಮ್ಮ ನಿರೂಪಣೆಯಿಂದಲೇ ಮೋಡಿ ಮಾಡಿದ್ದ ಅಪರ್ಣಾ ಅವರ ನಿಧನದ ಸುದ್ದಿಯು ಆಘಾತವನ್ನು ಉಂಟುಮಾಡಿದೆ. ಅಪರ್ಣಾ ನಿಧನದ ಬಗ್ಗೆ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.
ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ. ಮೃತ ಅಪರ್ಣಾ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡಿ ಕನ್ನಡಿಗರ ಮನ ಗೆದ್ದ, ಖ್ಯಾತ ನಿರೂಪಕಿ, ನಟಿ ಶ್ರೀಮತಿ ಅಪರ್ಣ ಅವರ ಸಾವಿನಿಂದ ಮನಸ್ಸಿಗೆ ಅಪಾರ ನೋವುಂಟಾಗಿದೆ. ಅವರ ನಿಧನವು ಕಲಾ ಲೋಕಕ್ಕೆ ತುಂಬಲಾರದ ನಷ್ಟ. ನಿರೂಪಕಿಯಾಗಿ, ನಟಿಯಾಗಿ ದಶಕಗಳಿಂದ ದುಡಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ಹಾಗೂ ಸ್ನೇಹಿತರಿಗೆ ನನ್ನ ಸಾಂತ್ವನಗಳು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಕನ್ನಡ ನಾಡು ಒಬ್ಬ ಸಜ್ಜನಿಕೆಯ ನಿರೂಪಕಿಯನ್ನು ಕಳೆದುಕೊಂಡಂತಾಗಿದೆ ಅಂತಾ ಮಾಜಿ ಸಿಎಂ, ಹಾಲಿ ಸಂಸದ ಬಸವರಾಜ್ ಬೊಮ್ಮಾಯಿ ಪೋಸ್ಟ್ ಮಾಡಿದ್ದಾರೆ.
ಕನ್ನಡದ ಪ್ರಖ್ಯಾತ ನಟಿ, ನಿರೂಪಕಿ ಆಗಿದ್ದ ಶ್ರೀಮತಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ಬಹಳ ದುಃಖವಾಯಿತು. ಅನೇಕ ಕಾರ್ಯಕ್ರಮಗಳಲ್ಲಿ ಅವರು ನೆರೆವೇರಿಸಿಕೊಡುತ್ತಿದ್ದ ಅಚ್ಚಕನ್ನಡದ ನಿರೂಪಣೆ ಮತ್ತು ಬೆಳ್ಳಿತೆರೆ, ಕಿರುತೆರೆಯ ಮೇಲಿನ ಅವರ ಅಭಿನಯ ಯಾವತ್ತಿಗೂ ಚಿರಸ್ಮರಣೀಯ. ಅವರ ನಿರೂಪಣಾ ಶೈಲಿ ವಿಶಿಷ್ಟವಾಗಿತ್ತು. ನೆಲದ ಸೊಗಡಿನ ಪ್ರತಿಭಾವಂತರೊಬ್ಬರು ನಮ್ಮನ್ನು ಅಗಲಿದ್ದಾರೆ. ಅಪರ್ಣಾ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೆಚ್ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಖ್ಯಾತ ನಿರ್ದೇಶಕ ಟಿ.ಎನ್ ಸೀತಾರಾಮ್ ಅಪರ್ಣಾ ಕೆಲಸದ ಬಗ್ಗೆ ಕೆಲ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಬಸ್ ನಿಲ್ದಾಣಕ್ಕೆ ಹೋದರೆ, ಏರ್ಪೋರ್ಟ್ಗೆ ಹೋದರೆ, ಮೆಟ್ರೋ ನಿಲ್ದಾಣಕ್ಕೆ ಹೋದರೆ, ರೈಲ್ವೇ ನಿಲ್ದಾಣಕ್ಕೆ ಹೋದರೆ.. ಎಲ್ಲಿ ಹೋದರೂ ಅವರ ಕನ್ನಡದ ಧ್ವನಿ ಇರುತ್ತಿತ್ತು. ಅವರು ಕನ್ನಡದ ಮೇಲೆ ಪ್ರೀತಿ ಬರುವ ಹಾಗೆ ಮಾಡುವವರು. ಅಯ್ಯೋ ಇದು ನಮ್ಮ ಕನ್ನಡ ಅನ್ನೋ ರೀತಿ ಮಾಡೋರು. ಅದು ಕೇವಲ ಮೆಕಾನಿಕ್ ಆಗಿ ಅಲ್ಲ. ಅನೇಕ ಕಲಾವಿದರೂ ಕೂಡ ಕನ್ನಡದ ಬಗ್ಗೆ ಪ್ರೀತಿ ಹುಟ್ಟಿಸಿದ್ದಾರೆ. ಅಂತವರಲ್ಲಿ ಅಪರ್ಣ ಕೂಡ ಒಬ್ಬರು. ಆದರೆ ಅವರು ಚಿಕ್ಕ ವಯಸ್ಸಿನಲ್ಲಿಯೇ ಹೋಗಿ ಬಿಡ್ತಾರೆ. ತುಂಬಾ ನೋವಿನ ವಿಚಾರ ಎಂದು ಟಿ.ಎನ್.ಸೀತಾರಾಮ್ ಭಾವುಕರಾಗಿದ್ದಾರೆ.
ಅವರ ಕನ್ನಡವನ್ನು ಕೇಳೋಕೆ ನಮ್ಮ ಕಿವಿಗಳು ತುಂಬಾ ಪುಣ್ಯ ಮಾಡಿದ್ವು. ತುಂಬಾ ಚೆನ್ನಾಗಿ ಕನ್ನಡವನ್ನು ಮಾತನಾಡೋರು. ಅವರ ಕನ್ನಡ ಕೇಳೋಕೆ ನನಗೆ ತುಂಬಾ ಖುಷಿ ಆಗುತ್ತಿತ್ತು. ಸ್ವೀಟ್ ವಾಯ್ಸ್ ಅವರದ್ದಾಗಿತ್ತು. ಮತನಾಡುವ ಶೈಲಿ ಕೂಡ ಚೆನ್ನಾಗಿ ಇರುತ್ತಿತ್ತು . ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ.. ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ ಎಂದು ಹಿರಿಯ ನಟಿ ಗಿರಿಜಾ ಲೋಕೇಶ್ ನೆನಪಿಸಿಕೊಂಡಿದ್ದಾರೆ.