ಬಾಗಲಕೋಟೆ: ಮಾನ್ಯ ಸಿದ್ದರಾಮಯ್ಯನವರೇ ನೀವು ಮುಖ್ಯಮಂತ್ರಿ ಸ್ಥಾನದಲ್ಲಿದ್ದು, ಬಡವರ, ದಲಿತರ ಮತ್ತು ರೈತರ ಕಣ್ಣೀರು ಒರೆಸಿದ್ದೀರಾ? ಅಭಿವೃದ್ಧಿ ಕೆಲಸ ಮಾಡಿದ್ದೀರಾ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.
ಬಾಗಲಕೋಟೆಯಲ್ಲಿ ಇಂದು ಬಿಜೆಪಿ ಜನಾಕ್ರೋಶ ಯಾತ್ರೆಯ ಸಂದರ್ಭದಲ್ಲಿ ರಾಜ್ಯ ಸರಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ಬಾರುಕೋಲು ಪ್ರದರ್ಶಿಸಿದರು. ನಂತರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಜನಾಕ್ರೋಶ ಯಾತ್ರೆಯ ಮೊದಲ ಹಂತ ಯಶಸ್ವಿಯಾಗಿ ಮುಗಿದಿದೆ. ಮಾನ್ಯ ಸಿದ್ದರಾಮಯ್ಯನವರೇ, ನೀವು ಮುಖ್ಯಮಂತ್ರಿಗಳಾದ ಬಳಿಕ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿವೆ. ಹಿಂದೂ ಹೆಣ್ಮಕ್ಕಳ ಮೇಲೆ ಅಪಮಾನ, ಲವ್ ಜಿಹಾದ್, ಗೋಹತ್ಯೆಗಳು ಪ್ರಕರಣಗಳು ಸೇರಿದಂತೆ ಸಾಲು ಸಾಲು ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗೆಟ್ಟಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಹಿಂದೆ ಯಡಿಯೂರಪ್ಪನವರ ಬಿಜೆಪಿ ಸರಕಾರ ಇದ್ದಾಗ ರೈತರು ತಮ್ಮ ಹೊಲಕ್ಕೆ ಟ್ರಾನ್ಸ್‍ಫಾರ್ಮರ್ ಹಾಕಿಸಲು 25 ಸಾವಿರ ಕಟ್ಟಿದ್ದರೆ ಸಾಕಾಗಿತ್ತು. ಆದರೆ, ರೈತಪರ ಮೊಸಳೆ ಕಣ್ಣೀರು ಹಾಕುವ ಸಿದ್ದರಾಮಯ್ಯನವರ ಸರಕಾರದಲ್ಲಿ ಎರಡೂವರೆಯಿಂದ 3 ಲಕ್ಷ ರೂ ಕಟ್ಟುವ ಪರಿಸ್ಥಿತಿ ನಿರ್ಮಿಸಿ ರೈತರ ಜೇಬಿಗೆ ಕತ್ತರಿ ಹಾಕಿದ್ದೀರಿ ಎಂದು ಟೀಕಿಸಿದರು.
ಹಿಂದೆ 5 ವರ್ಷ ನೀವು ಸಿಎಂ ಆಗಿದ್ದಾಗ ಏನು ಸಾಧನೆ ಮಾಡಿದ್ದೀರಿ. ಹಿಂದಿನ ಬಾರಿ ವೀರಶೈವ ಧರ್ಮ ಎಂದು ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದೀರಲ್ಲವೇ ಎಂದು ಆಕ್ಷೇಪಿಸಿದರು. ಅದಕ್ಕಾಗಿ ರಾಜ್ಯದ ಜನ ನಿಮ್ಮನ್ನು ನೆನಪಿಟ್ಟುಕೊಳ್ಳಬೇಕೇ ಎಂದು ಬಿ.ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಮುಸಲ್ಮಾನರಿಗೆ ಸರಕಾರಿ ಕಾಮಗಾರಿಯಲ್ಲಿ ಶೇ 4ರಷ್ಟು ಮೀಸಲಾತಿ ಕೊಡುತ್ತಿರುವುದನ್ನು ತೀವ್ರವಾಗಿ ವಿರೋಧಿಸಿದ ಅವರು, ಮುಸಲ್ಮಾನರ ಹೆಣ್ಮಕ್ಕಳಿಗೆ ಮದುವೆಗೆ 50 ಸಾವಿರ ಕೊಟ್ಟರೆ, ಹಿಂದೂಗಳಲ್ಲಿ ಬಡವರಿಲ್ಲವೇ? ಮುಸಲ್ಮಾನ ಯುವಜನರು ವಿದೇಶಕ್ಕೆ ಉನ್ನತ ಶಿಕ್ಷಣ ಪಡೆಯಲು ಹೋಗುವುದಾದರೆ 30 ಲಕ್ಷ ನೀಡುವುದಾಗಿ ಹೇಳಿದ್ದೀರಿ. ಹಿಂದೂಗಳಲ್ಲಿ ಬಡವರಿಲ್ಲವೇ ಎಂದು ಸಿಎಂ ವಿರುದ್ಧ ಹರಿಹಾಯ್ದರು. ಹಿಂದೂಗಳಿಗೆ ಯಾತಕ್ಕೋಸ್ಕರ ಅಪಮಾನ ಮಾಡುತ್ತಿದ್ದೀರಿ ಎಂದು ಬಿ.ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಯಾವುದೇ ಲೋಕಸಭಾ, ವಿಧಾನಸಭಾ ಚುನಾವಣೆ ಇಲ್ಲ. ಆದರೂ, ನಾವು ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದ್ದೇವೆ. ಅಭಿವೃದ್ಧಿ ಕೆಲಸ, ಸರ್ವತೋಮುಖ ಅಭಿವೃದ್ಧಿಯ ಭರವಸೆ ನೀಡಿ ಕಾಂಗ್ರೆಸ್ಸಿನವರು ಅಧಿಕಾರಕ್ಕೆ ಬಂದವರು. ಆದರೆ, ಸಿದ್ದರಾಮಯ್ಯನವರ ನೇತೃತ್ವದ ಜನವಿರೋಧಿ, ರೈತ ವಿರೋಧಿ, ಹಿಂದೂ ವಿರೋಧಿ ಸರಕಾರ ಇದೆ. 50ಕ್ಕೂ ಜನೋಪಯೋಗಿ ವಸ್ತುಗಳ ಬೆಲೆ ಏರಿಸಿದ್ದಾರೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ಜನಾಂಗದ 38 ಸಾವಿರ ಕೋಟಿ ಹಣವನ್ನು ದುರುಪಯೋಗ ಮಾಡಿಕೊಂಡಿದೆ. ಅಲ್ಪಸಂಖ್ಯಾತರ ತುಷ್ಟೀಕರಣ ಹೆಚ್ಚಾಗಿದೆ ಎಂದು ಗುಡುಗಿದ್ದಾರೆ.