ಸಿನಿಮಾ ಮಾಡಲು ಹೋಗಿ ಮಗಳ ನೆಚ್ಚಿನ ಕಾರ್ ಕೂಡ ಮಾರಿಕೊಂಡ್ರು ಅಜಯ್ ರಾವ್ ಅನ್ನೋದು ವೈರಲ್ ಆದ ವಿಡಿಯೋದಿಂದ ಗೊತ್ತಾಯ್ತು. ಅದ್ರೆ ಯುದ್ಧಕಾಂಡ ಸಿನಿಮಾ ಮಾಡೋಕೆ ಅವರು ಹಾಕಿರೋ ಎಫರ್ಟ್ ಎಷ್ಟಿದೆ..? ನೋಡುಗರಿಗೆ ಮನರಂಜನೆ ಜೊತೆ ಮನೋವಿಕಾಸಗೊಳಿಸಬಲ್ಲ ಸಿನಿಮಾದಲ್ಲಿ ಏನೆಲ್ಲಾ ಹೈಲೈಟ್ಸ್ ಇದೆ ಅನ್ನೋದನ್ನ ಮೇಕಿಂಗ್ ಸಮೇತ ತೋರಿಸ್ತೀವಿ.
ಯುದ್ಧಕಾಂಡ ಅಂದಾಕ್ಷಣ ನೆನಪಾಗೋದೇ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಸಿನಿಮಾ. ಆದ್ರೀಗ ಯುದ್ಧಕಾಂಡ ಚಾಪ್ಟರ್-2 ಬರ್ತಿದೆ. ಅದ್ರ ಕಂಪ್ಲೀಟ್ ಸಾರಥಿ ಒನ್ ಅಂಡ್ ಓನ್ಲಿ ಕೃಷ್ಣ ಅಜಯ್ ರಾವ್. ಸ್ವತಃ ರವಿಮಾಮನೇ ಬಂದು ಟ್ರೈಲರ್ ಲಾಂಚ್ ಮಾಡಿ, ಟೀಂಗೆ ಹರಸಿ ಹಾರೈಸಿದ್ರು. ಟೈಟಲ್‌ಗೆ ಪೂರಕವಾಗಿ ಚಿತ್ರದ ಕಥೆ ಇರಲಿದ್ದು, ನಿಜಕ್ಕೂ ನೋಡುಗರನ್ನ ಯೋಚಿಸುವಂತೆ ಮಾಡಲಿದೆ ಈ ಸಿನಿಮಾ.
ಪವನ್ ಭಟ್ ನಿರ್ದೇಶನದ ಯುದ್ಧಕಾಂಡ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಇದೇ ಶುಕ್ರವಾರ ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್ ಆಗ್ತಿದ್ದು, ಅಜಯ್ ರಾವ್ ಲೀಡ್‌ನಲ್ಲಿ ನಟಿಸೋದ್ರ ಜೊತೆಗೆ ಸಿನಿಮಾಗೆ ಬಂಡವಾಳ ಕೂಡ ಹೂಡಿದ್ದಾರೆ. ರಾಮಾಯಣಕ್ಕೆ ರಾಮ, ಮಹಾಭಾರತಕ್ಕೆ ಶ್ರೀಕೃಷ್ಣ, ಈ ಕಲಿಯುಗಕ್ಕೆ ಚಿತ್ರದ ನಾಯಕನಟ ಅನ್ನೋ ನಿಟ್ಟಿನಲ್ಲಿ ಈ ಸಿನಿಮಾ ಚಿತ್ರಿಸಲಾಗಿದೆ.
ಅಂದಹಾಗೆ ಇದೊಂದು ಹೆಣ್ಣು ಮಗುವಿನ ಮೇಲೆ ಆಗುವ ಅತ್ಯಾಚಾರ, ಅದಕ್ಕಾಗಿ ಆ ಮಗುವಿನ ತಾಯಿ ಒದ್ದಾಟ, ತೊಳಲಾಟದ ಕುರಿತ ಕಥೆ ಹೊಂದಿದೆ. ಅಜಯ್ ರಾವ್ ಕರಿಕೋಟು ಧರಿಸಿ, ಕೋರ್ಟ್ ನಲ್ಲಿ ವಾದಿಸೋ ವಕೀಲರಾಗಿ ಕಾಣಸಿಗಲಿದ್ದಾರೆ. ಇಲ್ಲಿ ಕೆಜಿಎಫ್ ಫೇಮ್ ಅರ್ಚನಾ ಜೋಯಿಸ್ ಕೂಡ ಗಮನ ಸೆಳೆಯೋ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಹಿರಿಯ ನಟ ಪ್ರಕಾಶ್ ಬೆಳವಾಡಿ ತಾರಾಗಣದಲ್ಲಿದ್ದಾರೆ.
ಅಂದಹಾಗೆ ಯುದ್ಧಕಾಂಡ ಚಾಪ್ಟರ್-2 ನಿರ್ಮಾಣಕ್ಕಾಗಿ ಅಜಯ್ ರಾವ್ ತಮ್ಮ ಮಗಳ ನೆಚ್ಚಿನ ದುಬಾರಿ ಕಾರ್ ಮಾರಿಕೊಂಡಿದ್ರು. ಅದರ ವಿಡಿಯೋ ಇತ್ತೀಚೆಗೆ ಸಖತ್ ವೈರಲ್ ಕೂಡ ಆಗಿತ್ತು. ಆದ್ರೆ ಅದಾದ ಬಳಿಕ ಅಜಯ್ ರಾವ್ ಮತ್ತೊಂದು ಕಾರ್ ಖರೀದಿ ಮಾಡಿದ್ದು, ಹೊಸ ಮನೆ ಮಾಡಿದ್ದು, ಜಮೀನು ಮಾಡಿದ್ದು ಎಷ್ಟೋ ಮಂದಿಗೆ ಗೊತ್ತಿಲ್ಲ. ಅವರಿಗಿರೋ ಸಿನಿಮಾ ಪ್ಯಾಷನ್ ಎಂಥದ್ದು ಅನ್ನೋದಕ್ಕೆ ಈ ಮೇಕಿಂಗ್ ದೃಶ್ಯಗಳೇ ಸಾಕ್ಷಿ.
ಕೋರ್ಟ್ ಡ್ರಾಮಾ ಕ್ರಿಯೇಟ್ ಮಾಡೋದು ಅಷ್ಟು ಸುಲಭದ ಮಾತಲ್ಲ. ಅದಕ್ಕೆ ಬಹುದೊಡ್ಡ ತಯಾರಿ ಬೇಕಾಗುತ್ತೆ. ಕೋರ್ಟ್ ಹಾಲ್ ಸೆಟ್, ಕಾಸ್ಟ್ಯೂಮ್ಸ್, ವಕೀಲರು, ನ್ಯಾಯಾಧೀಶರ ನಟನೆ ಎಲ್ಲವೂ ಪರ್ಫೆಕ್ಟ್ ಆಗಿ ಇರಬೇಕಾಗುತ್ತೆ. ಯಾಕಂದ್ರೆ ಚಿತ್ರದ ಕಥೆ ತುಂಬಾ ಸೂಕ್ಷ್ಮ ವಿಚಾರಗಳನ್ನ ಒಳಗೊಂಡಿರಲಿದ್ದು, ರಿಲೀಸ್ ಬಳಿಕ ಈ ಚಿತ್ರದ ಬಗ್ಗೆ ಎಲ್ಲರೂ ಮಾತನಾಡುವಂತೆ ಆಗಲಿದೆ.