ದೆಹಲಿಯಲ್ಲೇ ಬೀಡುಬಿಟ್ಟಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಬಿಜೆಪಿ ನಾಯಕರ ವಿರುದ್ಧವೇ ದೂರು ನೀಡಿದ್ದಾರಂತೆ. ಯಾವಾಗಲೂ ನಾಲಿಗೆ ಹರಿಬಿಡೋ ಚಾಳಿ ಇರುವ ಯತ್ನಾಳ್ ಈಗ ಸೈಲೆಂಟಾಗಿ ತಮ್ಮವರ ವಿರುದ್ಧವೇ ದೂರು ನೀಡಿದ್ದಾರೆ ಅನ್ನೋ ವರದಿಯಾಗಿದೆ. ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದಿರೋ ಬಸನಗೌಡ ಪಾಟೀಲ್ ಕೆಲದಿನಗಳಿಂದ ದೆಹಲಿಯಲ್ಲೇ ಬೀಡುಬಿಟ್ಟು ರಾಜಕೀಯ ತಂತ್ರ ಹೆಣೆಯುತ್ತಿದ್ದಾರೆ ಎನ್ನಲಾಗಿದೆ. ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಬಿಜೆಪಿ ಹೈಕಮಾಂಡ್ ಬಳಿ ಯತ್ನಾಳ್ ದೂರು ಹೇಳಿದ್ದಾರೆ. ರಾಜ್ಯದಲ್ಲಿ ಯಾವ ಬಿಜೆಪಿ ನಾಯಕನೂ ಸರಿ ಇಲ್ಲ, ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ, ನನಗೆ ಪಕ್ಷದ ಜವಾಬ್ದಾರಿ ಕೊಡಿ, ಆಗ ನಾನು ಏನು ಅಂತ ತೋರಿಸ್ತೀನಿ ಅಂತ ಕೇಂದ್ರ ಬಿಜೆಪಿ ನಾಯಕರೊಂದಿಗೆ ಯತ್ನಾಳ್ ಮಾತನಾಡಿರೋ ಬಗ್ಗೆ ರಾಜ್ಯ ಬಿಜೆಪಿ ಪಾಳಯದೊಳಗೆ ಚರ್ಚೆ ನಡೆಯುತ್ತಿದೆ.