ಇಂದಿನಿಂದ 16ನೇ ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭವಾಗ್ತಿದೆ. ಸರ್ಕಾರದ ವಿರುದ್ಧ ಜೆಡಿಎಸ್, ಬಿಜೆಪಿ ಮೈತ್ರಿ ಹೋರಾಟ ಮಾಡಲು ಬಲವಾದ ಅಸ್ತ್ರಗಳನ್ನ ರೆಡಿ ಮಾಡ್ಕೊಂಡಿದೆ. ಮುಡಾ, ವಾಲ್ಮೀಕಿ ಅಕ್ರಮಗಳ ಮಧ್ಯೆ ಕಲಾಪ ಶುರುವಾಗುತ್ತಿದೆ. ಈ ಜೋಡಿ ಅಸ್ತ್ರಗಳನ್ನೇ ಹೆಗಲಿಗೇರಿಸಿಕೊಂಡು ವಿಪಕ್ಷಗಳು ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ಸನ್ನದ್ಧವಾಗಿವೆ. ಇದಕ್ಕೆ ಪ್ರತ್ಯಸ್ತ್ರ ಹೂಡಲು ಕಾಂಗ್ರೆಸ್ ಕೂಡ ರಣತಂತ್ರ ಹೆಣೆದಿದೆ.
ರಾಜ್ಯದಲ್ಲಿ ಮುಡಾ ಹಗರಣ ಕೋಲಾಹಲ ಸೃಷ್ಟಿಸಿದೆ. ವಾಲ್ಮೀಕಿ ನಿಗಮದ ಕರ್ಮಕಾಂಡ ಬಿರುಗಾಳಿ ಎಬ್ಬಿಸಿದೆ. ರಾಜ್ಯಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ವಾಕ್ಸಮರವನ್ನೇ ಸಾರಿದೆ. ಜತೆಗೆ ಬೀದಿಗಿಳಿದು ಹೋರಾಟ ನಡೆಸಿ ಸಿಎಂ ರಾಜೀನಾಮೆಗೆ ಪಟ್ಟುಹಿಡಿದಿದೆ. ಈ ಜಂಗೀಕುಸ್ತಿಯ ನಡುವೆ ಇಂದಿನಿಂದ ವಿಧಾನ ಮಂಡಲದ ಮುಂಗಾರು ಅಧಿವೇಶನ ಆರಂಭವಾಗುತ್ತಿದೆ. ಜುಲೈ 26ರವರೆಗೆ 16ನೇ ವಿಧಾನಸಭೆಯ 4ನೇ ಮುಂಗಾರು ಅಧಿವೇಶನ ನಡೆಯಲಿದೆ. ಮುಡಾ ಸೈಟ್ ಹಂಚಿಕೆಯಲ್ಲಿ ಅಕ್ರಮ ಆರೋಪ, ವಾಲ್ಮೀಕಿ ನಿಗಮದಲ್ಲಿನ 187 ಕೋಟಿ ರುಪಾಯಿ ಹಗರಣ ಆರೋಪ ಬಿಜೆಪಿಗೆ ಅಸ್ತ್ರವಾಗಿದೆ. ಇದೆ ವಿಚಾರ ಮುಂದಿಟ್ಟು ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್ ಜಂಟಿ ಹೋರಾಟಕ್ಕೆ ಸಜ್ಜಾಗಿವೆ.
ಅಧಿವೇಶನದಲ್ಲಿ ಮುಡಾ ಸೈಟ್ ಹಂಚಿಕೆ, ವಾಲ್ಮೀಕಿ ನಿಗಮದ ಅಕ್ರಮವನ್ನೇ ಪ್ರಧಾನವಾಗಿ ಪ್ರಸ್ತಾಪಿಸಲು ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಿರ್ಧರಿಸಿವೆ. ಈ 2 ವಿಷಯಗಳ ತಾರ್ಕಿಕ ಅಂತ್ಯಕ್ಕೆ ತಲುಪುವವರೆಗೂ ಹೋರಾಟಕ್ಕೆ ಮುಂದಾಗಿವೆ. ಇದಲ್ಲದೆ ಪರಿಶಿಷ್ಟ ಜಾತಿಗೆ ಮೀಸಲಿಟ್ಟಿದ್ದ ಹಣ ಗ್ಯಾರಂಟಿಗೆ ಬಳಕೆ, ಬೆಲೆ ಏರಿಕೆ, ಡೆಂಘೀ ನಿರ್ಲಕ್ಷ್ಯ, ಕಾನೂನು ಸುವ್ಯವಸ್ಥೆ ವಿಷಯಗಳನ್ನು ಸನ್ನಿವೇಶ ಆಧಾರಿತವಾಗಿ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ. ಸದನದಲ್ಲಿ ಯಾವುದೇ ವಿಷಯಕ್ಕೆ ಆರಂಭದಲ್ಲೇ ಪ್ರತಿಭಟನೆ ಬೇಡ. ವಿಷಯಗಳನ್ನು ಪ್ರಸ್ತಾಪಿಸಿದ ಬಳಿಕವೇ ಕೊನೆಯಲ್ಲಿ ಪ್ರತಿಭಟನೆ ಮಾಡಲು ತಂತ್ರ ರೂಪಿಸಿವೆ.