ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಜಿಲ್ಲೆಯಲ್ಲಿ ಶಿಕ್ಷಕರು ಹಲವು ರೀತಿಯ ಕಸರತ್ತು ಆರಂಭಿಸಿದ್ದಾರೆ. ಮಕ್ಕಳ ಮನೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಪರೀಕ್ಷೆ ಮುಗಿಯುವವರೆಗೆ ಮೊಬೈಲ್ ಮತ್ತು ಟಿವಿ ಉಪವಾಸ ಕೈಗೊಳ್ಳುವಂತೆ ಪಾಲಕರಲ್ಲಿ ಮನವಿ ಮಾಡುತ್ತಿದ್ದಾರೆ. ವಿಶೇಷವಾಗಿ ಗಂಡು ಮಕ್ಕಳಿಗೆ ರಾತ್ರಿಯೂ ತರಗತಿ ನಡೆಸುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಎರಡು ತಿಂಗಳಷ್ಟೇ ಬಾಕಿಯಿದೆ. 10ನೇ ತರಗತಿಯ ಪಠ್ಯವಸ್ತು ಬೋಧನೆ ಬಹುತೇಕ ಎಲ್ಲ ಶಾಲೆಗಳಲ್ಲಿ ಮುಗಿದಿದ್ದು, ಈಗ ಕಲಿಸಿದ್ದನ್ನು ಪುನರಾವರ್ತನೆ ಮಾಡುವುದು, ಸರಣಿ ಪರೀಕ್ಷೆ ನಡೆಸಿ ವಾರ್ಷಿಕ ಪರೀಕ್ಷೆಗೆ ಮಕ್ಕಳನ್ನು ಸಜ್ಜುಗೊಳಿಸುವ ಕಾರ್ಯ ನಡೆದಿದೆ. ಇದರೊಂದಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಮಕ್ಕಳ ಓದಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ. ಅದಕ್ಕಾಗಿ ವಿನೂತನ ಕ್ರಮ ಅನುಸರಿಸುತ್ತಿದ್ದಾರೆ. ಫಲಿತಾಂಶ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಶ್ರಮ ಹಾಕುತ್ತಿದ್ದಾರೆ.
ಟಿವಿ ಹಾಗೂ ಮೊಬೈಲ್ ಬಳಕೆಯಿಂದ ಮಕ್ಕಳ ಓದಿನ ಮೇಲಿನ ಏಕಾಗ್ರತೆ ಹೋಗುವುದರಿಂದ ಪರೀಕ್ಷೆ ಮುಗಿಯುವವರೆಗೆ ಇವೆರಡೂ ಸಾಧನ ಬಳಸದಂತೆ ಶಿಕ್ಷಕರು ಮನವರಿಕೆ ಮಾಡುತ್ತಿದ್ದಾರೆ. ಪ್ರತಿ ವಿದ್ಯಾರ್ಥಿಯ ಮನೆಗೆ ಹೋಗಿ ಪಾಲಕರಲ್ಲೂ ಈ ನಿಯಮ ಪಾಲಿಸುವಂತೆ ಹೇಳುತ್ತಿದ್ದಾರೆ. ಇದಕ್ಕೆ ಬಹುತೇಕ ಪಾಲಕರು ಸಮ್ಮತಿಸಿ ತಾವೂ ಕೂಡ ಟಿವಿ, ಮೊಬೈಲ್ಗಳಿಂದ ದೂರವಿರುತ್ತಿದ್ದಾರೆ. ಪ್ರತಿ ದಿನ ಶಾಲಾ ಅವಧಿ ಮುಗಿದ ಬಳಿಕ 10ನೇ ತರಗತಿ ಮಕ್ಕಳಿಗೆ ವಿಶೇಷ ತರಗತಿಯನ್ನು ಹಲವಾರು ಶಾಲೆಗಳಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಇದಲ್ಲದೇ ಸರಣಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪ್ರತಿ ವಿಷಯವಾರು ರಸ ಪ್ರಶ್ನೆ ಸ್ಪರ್ಧೆಯನ್ನು ಶಾಲೆ, ಕ್ಲಸ್ಟರ್, ತಾಲೂಕು ಹಂತಗಳಲ್ಲಿ ಏರ್ಪಡಿಸಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸುತ್ತಿರುವ ಶಿಕ್ಷಕರು, ಕನಿಷ್ಠ ಪಾಸಿಂಗ್ ಅಂಕ ಪಡೆಯಲು ಟಿಫ್ಸ್ ಹೇಳಿಕೊಡುತ್ತಿದ್ದಾರೆ. ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ವಿಷಯದ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಮಾಡಲಾಗುತ್ತಿದೆ.