ಕಲಬುರಗಿ ನಗರದ ನಾಗನಹಳ್ಳಿ ರೈಲ್ವೆ ಹಳಿಯಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಲಬುರಗಿ ತಾಲೂಕಿನ ಕುಮಸಿ ಗ್ರಾಮದ ಶಿವಕುಮಾರ್ (28) ಮೃತ ಯುವಕ ಎಂದು ಗುರುತಿಸಲಾಗಿದೆ. ಲಿವಿಂಗ್ ಟೂಗೆದರ್ ಸಂಬಂಧಕ್ಕೆ ಮನೆಯವರ ವಿರೋಧವೇ ಈ ದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ.
ಶಿವಕುಮಾರ್ ತನ್ನ ಜೀವಕ್ಕೆ ಕೊನೆಗೊಳಿಸುವ ಮುನ್ನ ಲಿವಿಂಗ್ ಟೂಗೆದರ್‌ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದ ಮಹಿಳೆಗೆ ಕರೆ ಮಾಡಿದ್ದ ಎಂದು ಮೂಲಗಳು ತಿಳಿಸಿವೆ. ಈ ಕರೆಯನ್ನು ಸ್ವೀಕರಿಸಿದ ಮಹಿಳೆ, ಶಿವಕುಮಾರ್‌ನನ್ನು ರಕ್ಷಿಸಲು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾಳೆ. ಆದರೆ, ರೈಲ್ವೆ ಹಳಿಯಲ್ಲಿ ರಕ್ಷಣೆಗೆ ಮುಂದಾದಾಗ ಮಹಿಳೆ ಕೂಡ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ.
ಗಾಯಗೊಂಡ ಮಹಿಳೆಯನ್ನು ತಕ್ಷಣವೇ ಕಲಬುರಗಿಯ ಜಿಮ್ಸ್ (ಗುಲ್ಬರ್ಗಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಲಿವಿಂಗ್ ಟೂಗೆದರ್‌ಗೆ ವಿರೋಧ
ಪ್ರಾಥಮಿಕ ಮಾಹಿತಿಯ ಪ್ರಕಾರ, ಶಿವಕುಮಾರ್ ಮತ್ತು ಆ ಮಹಿಳೆ ಲಿವಿಂಗ್ ಟೂಗೆದರ್ ಸಂಬಂಧದಲ್ಲಿದ್ದರು. ಆದರೆ, ಈ ಸಂಬಂಧಕ್ಕೆ ಶಿವಕುಮಾರ್‌ನ ಕುಟುಂಬದವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ವಿರೋಧದಿಂದ ಮನನೊಂದ ಶಿವಕುಮಾರ್ ರೈಲ್ವೆ ಹಳಿಯಲ್ಲಿ ಆತ್ಮಹತ್ಯೆಗೆ ಶರಣಾದನೆಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ವಾಡಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಿವಕುಮಾರ್‌ನ ಆತ್ಮಹತ್ಯೆಗೆ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.