ಗುಜರಾತ್ ರಾಜ್ಯದಲ್ಲಿ ‘ಚಾಂದಿಪುರ’ ಹೆಸರಿನ ವೈರಸ್ ಪತ್ತೆಯಾಗಿದೆ. ಈ ಸೋಂಕಿಗೆ ಜು.10ರಿಂದ ಈವರೆಗೆ 8 ಮಕ್ಕಳು ಸಾವನ್ನಪ್ಪಿದ್ದು, ಈವರೆಗೆ 12 ಜನರಿಗೆ ಈ ಸೋಂಕು ತಗುಲಿದೆ. ಮಹಾರಾಷ್ಟ್ರದ ಚಾಂದಿಪುರದಲ್ಲಿ 1965ರಲ್ಲಿ ಇದು ಮೊದಲ ಬಾರಿ ಕಾಣಿಸಿತ್ತು. ಹೀಗಾಗಿ ಇದಕ್ಕೆ ಚಾಂದಿಪುರ ವೈರಸ್ ಎನ್ನುತ್ತಾರೆ. ರಾಬ್ಡೋವೆರಿಡೆ ವರ್ಗಕ್ಕೆ ಸೇರಿದ ವೈರಸ್ ಈ ರೋಗಕ್ಕೆ ಕಾರಣ. ಇದು ಸಾಂಕ್ರಾಮಿಕ ರೋಗ ಅಲ್ಲದಿದ್ದರೂ ಸೊಳ್ಳೆ, ನೊಣಗಳಿಂದ ಈ ಸೋಂಕು ಹರಡುತ್ತದೆ. ರೋಗ ನಿರೋಧಕ ಶಕ್ತಿ ಕಮ್ಮಿ ಇರುವ ಮಕ್ಕಳಲ್ಲಿ ಇದು ಹೆಚ್ಚು ಇದ್ದು, ಗುಜರಾತ್ ಸಬರ್ಕಾಂಠಾ, ಅರಾವಳಿ, ಮಹಿಸಾರ, ಖೇಡಾ ಜಿಲ್ಲೆಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಇನ್ನು ಮಧ್ಯಪ್ರದೇಶ ಮತ್ತು ರಾಜಸ್ಥಾನದ ಮೂಲದ ತಲಾ ಒಬ್ಬರಲ್ಲಿಯೂ ಈ ಸೋಂಕು ಕಾಣಿಸಿಕೊಂಡಿದ್ದು, ಗುಜರಾತ್ ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಚಾಂದಿಪುರ ಸೋಂಕು ಸಾಮಾನ್ಯ ಜ್ವರದ ರೋಗ ಲಕ್ಷಣಗಳಂತೆಯೇ ಇರುತ್ತದೆ. ದಿಢೀರ್ ಜ್ವರ, ತೀವ್ರ ತಲೆನೋವು, ವಾಂತಿ, ಸ್ನಾಯು ಸೆಳೆತ, ಪ್ರಜ್ಞಾಹೀನತೆ, ಅರೆನಿದ್ರಾವಸ್ಥೆ ಸೇರಿದಂತೆ ಕೆಲ ಲಕ್ಷಣಗಳು ಈ ರೋಗ ಬಂದವರಲ್ಲಿ ಕಾಣಿಸಿಕೊಳ್ಳುತ್ತದೆ.