ತುಮಕೂರು ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾಗಿ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಗೆದ್ದ ಆರಂಭದಲ್ಲೇ ತುಮಕೂರು ಕ್ಷೇತ್ರವನ್ನು ವಾರಣಾಸಿ ಮಾದರಿಯಲ್ಲಿ ಅಭಿವೃದ್ಧಿ ಮಾಡುವತ್ತ ದಾಪುಗಾಲು ಇಟ್ಟಿದ್ದಾರೆ. ಈಗಾಗಲೇ ಚೆನ್ನೈ ಟು ಶಿವಮೊಗ್ಗ ರೈಲು ಸಂಚಾರವನ್ನು ತುಮಕೂರು ಮೂಲಕ ಆರಂಭಿಸಿದ್ದಾರೆ. ಜಿಲ್ಲೆಯಲ್ಲಿ 350 ಕೋಟಿ ವೆಚ್ಚದಲ್ಲಿ 5 ಮೇಲ್ಸೇತುವೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಈ ಮೂಲಕ ವಿ. ಸೋಮಣ್ಣ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತುಮಕೂರು ಜಿಲ್ಲೆಗೆ ಮೊದಲ ಕೊಡುಗೆ ನೀಡಿದ್ದಾರೆ. ತುಮಕೂರು ನಗರದ ಕ್ಯಾತ್ಸಂದ್ರ ಸ್ಟೇಶನ್-ಮೈದಾಳ ಗೇಟ್ ನಡುವೆ 57.3 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆ. ಅಂತೆಯೇ 89.03 ಕೋಟಿ ವೆಚ್ಚದಲ್ಲಿ ಬಡ್ಡಿಹಳ್ಳಿ ಗೇಟ್ ಅಗ್ನಿಶಾಮಕ ದಳದ ಬಳಿ, 97.69 ಕೋಟಿ ವೆಚ್ಚದಲ್ಲಿ ಬಟವಾಡಿ ಗೇಟ್ ಸಮೀಪ, 55.99 ಕೋಟಿ ವೆಚ್ಚದಲ್ಲಿ ಅರೆಯೂರು ರಸ್ತೆ ಬಳಿ ಹಾಗೂ 50.57 ಕೋಟಿ ವೆಚ್ಚದಲ್ಲಿ ತುಮಕೂರು ಮೈಸೂರು ರಸ್ತೆಯ ನಿಟ್ಟೂರು ರೈಲ್ವೆ ಸ್ಟೇಷನ್ ಹತ್ತಿರ ಮೇಲ್ಸೇತುವೆ ನಿರ್ಮಾಣವಾಗಲಿದೆ.