ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಡಾ.ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಗೊಳಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಅನ್ನುವುದು ತೀರಾ ಸಹಜವಾದ ವಿಚಾರ. ಇಂದು ಇದು ವಿಶ್ವದಾದ್ಯಂತ ಕೇಳಿ ಬರುತ್ತಿರುವ ಕೂಗು. ಆದರೆ, ಅದು ಇಂದಿಗೂ ಹಲವು ರಾಜ್ಯಗಳಲ್ಲಿ ಆದರ್ಶವಾಗಿಯೇ ಉಳಿದಿದೆ. ಕರ್ನಾಟಕದಲ್ಲಿ ಸಾಕಷ್ಟು ಕೇಂದ್ರೋದ್ಯಮಗಳು, ಸಾರ್ವಜನಿಕ ಹಾಗೂ ಖಾಸಗಿ ಉದ್ಯಮಗಳಿದ್ದರೂ ಕನ್ನಡಿಗರಿಗೆ ಸೂಕ್ತ ಪ್ರಮಾಣದಲ್ಲಿ ಉದ್ಯೋಗಾವಕಾಶಗಳು ದೊರೆಯುತ್ತಿಲ್ಲ. ಇದು ಸ್ವಾತಂತ್ರ್ಯಪೂರ್ವದಿಂದದಲೂ ಇರುವ ಸ್ಥಿತಿ. ಇದನ್ನು ಗಮನಿಸಿ ರಾಜ್ಯ ಸರ್ಕಾರ ಕನ್ನಡಿಗರಿಗೆ ಉದ್ಯೋಗದಲ್ಲಿ ಸೂಕ್ತ ಅವಕಾಶ ಸಿಗುವಂತೆ ಮಾಡಲು ೧೯೮೧ರಿಂದಲೂ ಪ್ರಯತ್ನ ನಡೆಸಿದೆ. ಆ ನಿಟ್ಟಿನಲ್ಲಿ ಅಂದಿನ ಸರ್ಕಾರ ಡಾ.ಸರೋಜಿನಿ ಮಹಿಷಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತು ಎಂದು ಪುರುಷೋತ್ತಮ ಬಿಳಿಮಲೆಯವರು ವಿವರಿಸಿದರು.
ರಾಜ್ಯದಲ್ಲಿ ಕನ್ನಡಿಗರ ಉದ್ಯೋಗ ಸಮಸ್ಯೆಯ ಸ್ವರೂಪವನ್ನು ಅಧ್ಯಯನ ಮಾಡಿ, ಕಾರ್ಯಸಾಧುವಾದ ಪರಿಹಾರ ಮಾರ್ಗಗಳನ್ನು ಸೂಚಿಸಿ ವರದಿ ಸಲ್ಲಿಸಲು ಸಂಸದೆ ಡಾ.ಸರೋಜಿನಿ ಮಹಿಷಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತು. ಸಮಿತಿಯು ಹಲವು ಉದ್ಯಮ, ಸಂಸ್ಥೆಗಳಿಗೆ, ಬ್ಯಾಂಕ್ಗಳಿಗೆ ಭೇಟಿ ನೀಡಿ, ಬೇರೆ ರಾಜ್ಯಗಳಿಂದ ಅಗತ್ಯ ಮಾಹಿತಿಯನ್ನು ತರಿಸಿಕೊಂಡು ಎಲ್ಲವನ್ನು ಗಮನಿಸಿ ವರದಿ ಸಲ್ಲಿಸಿತು. ಈ ವರದಿಯನ್ನು ಗಮನಿಸಿ ಇದೇ ಮಾದರಿಯಲ್ಲಿ ಕೆಲವು ರಾಜ್ಯಗಳು ಕಾನೂನು ರಚಿಸಿವೆ. ಡಾ.ಸರೋಜಿನಿ ಮಹಿಷಿ ವರದಿಯು ಸ್ಥಳೀಯರಿಗೆ ಉದ್ಯೋಗ ಎಂಬುದಕ್ಕೆ ತಾತ್ವಿಕ ನೆಲೆಯನ್ನು ಒದಗಿಸಿತು. ಹಾಗೇ ಸ್ಥಳೀಯರು ಎಂದರೆ ಯಾರು ಎಂಬುದಕ್ಕೆ ಖಚಿತ ಮಾಪನವನ್ನು ಅಳವಡಿಸಿ ರಾಷ್ಟ್ರದ ಗಮನ ಸೆಳೆಯಿತು. ಮಹಿಷಿ ವರದಿಯು ಸೂಚಿಸಿರುವ ‘ಸ್ಥಳೀಯರು’ (ಕನಿಷ್ಟ ೧೫ ವರ್ಷಗಳಿಂದಲೂ ನಿವಾಸಿ) ಮಾನದಂಡವನ್ನು ಹಲವು ರಾಜ್ಯಗಳು ಅಳವಡಿಸಿಕೊಂಡಿವೆ ಎಂದು ಹೇಳಿದರು.
ಈ ಎಲ್ಲ ಅಂಶಗಳನ್ನು ಗಮನಿಸಿ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಮೀಸಲು ನೀಡುವ ಮಸೂದೆಯನ್ನು ಮತ್ತೊಮ್ಮೆ ಪರಮಾರ್ಶಿಸಿ ಹಾಗೂ ಡಾ.ಸರೋಜಿನಿ ಮಹಿಷಿ ವರದಿಯಲ್ಲಿರುವ ಅಂಶಗಳನ್ನು ಗಮನಿಸಿ ಖಾಸಗಿ ವಲಯದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಲಭಿಸುವಂತೆ ಸರ್ಕಾರ ಕ್ರಮ ವಹಿಸಬೇಕೆಂದು ಪ್ರಾಧಿಕಾರದ ಅಧ್ಯಕ್ಷರು ಮನವಿ ಮಾಡಿದರು.