ಖ್ಯಾತ ನಿರ್ಮಾಪಕ, ನಿರ್ದೇಶಕ ಹಾಗೂ ಈಗಲ್ ಮೀಡಿಯಾ ಕ್ರಿಯೇಷನ್ಸ್ ಸ್ಥಾಪಕ ನವರಸನ್ ನಿರ್ಮಾಣದ, ಕಿರಣ್ ಕುಮಾರ್ ನಿರ್ದೇಶನದ ಹಾಗೂ ಜನಪ್ರಿಯ ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ “ಸೂತ್ರಧಾರಿ” ಚಿತ್ರ ಮೇ 9 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಚಿತ್ರ ಬಿಡುಗಡೆಗೂ ಮುನ್ನ ನಿರ್ಮಾಪಕ ನವರಸನ್, ನಿರ್ದೇಶಕ ಕಿರಣ್ ಕುಮಾರ್, ನಾಯಕ ಚಂದನ್ ಶೆಟ್ಟಿ ಹಾಗೂ ನಾಯಕಿ ಅಪೂರ್ವ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಚಿತ್ರ ಯಶಸ್ವಿಯಾಗಲೆಂದು ಏಳುಬೆಟ್ಟದ ಒಡೆಯನ ಹತ್ತಿರ ಚಿತ್ರತಂಡದ ಸದಸ್ಯರು ಪ್ರಾರ್ಥನೆ ಮಾಡಿದ್ದಾರೆ.
ಕಾಣಿಪಕ್ಕಂ ನ ಗಣೇಶ, ತಿರುಚಾನೂರು ಪದ್ಮಾವತಿ ಅಮ್ಮನವರು ಹಾಗೂ ಗೋಲ್ಡನ್ ಟಂಪಲ್ ನ ಮಹಾಲಕ್ಷ್ಮಿ ದೇವಸ್ಥಾನಕ್ಕೂ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿದ್ದಾರೆ.
“ಸೂತ್ರಧಾರಿ” ಶೀರ್ಷಿಕೆ ಗೀತೆಗೆ ಅಭಿಮಾನಿಗಳು ಫಿದಾ
ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಕನ್ನಡ ಸೇರಿದಂತೆ ಅನೇಕ ಭಾಷೆಗಳ 1800ಕ್ಕೂ ಅಧಿಕ ಚಿತ್ರಗಳ ಇವೆಂಟ್ ಗಳನ್ನು ಆಯೋಜಿಸಿರುವ, ಅಷ್ಟೇ ಅಲ್ಲದೆ ನಿರ್ಮಾಪಕ ಹಾಗೂ ನಿರ್ದೇಶಕರಾಗಿಯೂ ಜನಪ್ರಿಯರಾಗಿರುವ ನವರಸನ್ ನಿರ್ಮಾಣದ ಹಾಗೂ ತಮ್ಮದೇ ಆದ ವಿಶಿಷ್ಟ ಶೈಲಿಯ ಗಾಯನದ ಮೂಲಕ ಜನಮನ ಗೆದ್ದಿರುವ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ “ಸೂತ್ರಧಾರಿ” ಚಿತ್ರದ ಶೀರ್ಷಿಕೆ ಗೀತೆ ಇತ್ತೀಚೆಗೆ ಮಂತ್ರಿ ಮಾಲ್ ನಲ್ಲಿ ನೆರೆದಿದ್ದ ಸಹಸ್ರಾರು ಜನರ ಸಮ್ಮಖದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು.
ಸಾಯಿ ಗೋಲ್ಡ್ ಪ್ಯಾಲೆಸ್ ನ ಶರವಣ ಅವರು ಈ ಸಮಾರಂಭವನ್ನು ಆಯೋಜಿಸಿದ್ದರು ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ನಿರ್ಮಾಪಕರಾದ ಚೇತನ್ ಗೌಡ, ಜಗದೀಶ್ ಗೌಡ, ರಾಜೇಶ್ ಹಾಗೂ ಗಜೇಂದ್ರ ಅವರು ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ತಮ್ಮ ಪ್ರೋತ್ಸಾಹ ಭರಿತ ಮಾತುಗಳ ಮೂಲಕ “ಸೂತ್ರಧಾರಿ” ಚಿತ್ರಕ್ಕೆ ಯಶಸ್ಸನ್ನು ಕೋರಿದರು. ವಿಜಯ್ ಈಶ್ವರ್ ಅವರು ಬರೆದಿರುವ “ಸೂತ್ರಧಾರಿ” ಚಿತ್ರದ ಶೀರ್ಷಿಕೆ ಗೀತೆಯನ್ನು ನಾಯಕನಾಗಿ ನಟಿಸಿರುವ ಚಂದನ್ ಶೆಟ್ಟಿ ಅವರೆ ಹಾಡಿದ್ದಾರೆ ಜೊತೆಗೆ ಸಂಗೀತವನ್ನೂ ಸಂಯೋಜಿಸಿದ್ದಾರೆ. A2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಅರ್ಥಗರ್ಭಿತ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಮ್ಮ “ಸೂತ್ರಧಾರಿ” ಸಿನಿಮಾ ಆರಂಭವಾದಗಿನಿಂದಲೂ ತಾವೆಲ್ಲರೂ ನೀಡುತ್ತಿರುವ ಪ್ರೋತ್ಸಾಹಕ್ಕೆ ಚಿರ ಋಣಿ. ಇನ್ನೂ ಸದಾ ನನ್ನ ಎಲ್ಲಾ ಕೆಲಸಗಳಿಗೂ ಜೊತೆಗಿದ್ದು, ಪ್ರೋತ್ಸಾಹ ನೀಡುವ ಸಾಯಿ ಗೋಲ್ಡ್ ಪ್ಯಾಲೆಸ್ ನ ಶರವಣ, ಚೇತನ್ ಗೌಡ, ಜಗದೀಶ್ ಗೌಡ, ರಾಜೇಶ್, ಗಜೇಂದ್ರ ಮುಂತಾದವರು ಇಂದಿನ ಸಮಾರಂಭಕ್ಕೆ ಆಗಮಿಸಿದ್ದಾರೆ. ಅವರಿಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಧನ್ಯವಾದ. ವಿಜಯ್ ಈಶ್ವರ್ ಅವರು ಬರೆದಿರುವ ಈ ಚಿತ್ರದ ಟೈಟಲ್ ಸಾಂಗ್ ತುಂಬಾ ಚೆನ್ನಾಗಿದೆ. ಅರ್ಥಗರ್ಭಿತ ಈ ಹಾಡು ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ. ಚಿತ್ರ ಮೇ 9 ರಂದು ಬಿಡುಗಡೆಯಾಗಲಿದೆ ಎಂದರು ನಿರ್ಮಾಪಕ ನವರಸನ್.
ನಾನು ನಾಯಕನಾಗಬೇಕೆಂಬ ಆಸೆ ನಮ್ಮ ಅಪ್ಪನದು. ಇದೇ ಮೇ 9 ನೇ ತಾರೀಖು ಅವರ ಆಸೆ ಈಡೇರುತ್ತಿದೆ. ನಾನು ನಾಯಕನಾಗಿ ನಟಿಸಿರುವ ಮೊದಲ ಸಿನಿಮಾ ಅಂದು ಬಿಡುಗಡೆಯಾಗುತ್ತಿದೆ. ಗಾಯಕನಾಗಿ ನನ್ನನ್ನು ಎಲ್ಲರೂ ಮೆಚ್ಚಿಕೊಂಡು ಆಶೀರ್ವದಿಸಿದ್ದೀರಿ. ಈಗ ನಾಯಕನಾಗೂ ಮೆಚ್ಚಿಕೊಳ್ಳುತ್ತೀರಾ ಎಂಬ ಭರವಸೆ ಇದೆ. ಈ ಚಿತ್ರದಲ್ಲಿ ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ಅಪೂರ್ವ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಂಜನಾ ಆನಂದ್, ತಬಲ ನಾಣಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ವಿಜಯ್ ಈಶ್ವರ್ ಅವರು ಬರೆದು ನಾನೇ ಹಾಡಿ ಸಂಗೀತವನ್ನೂ ನೀಡಿರುವ ಚಿತ್ರದ ಶೀರ್ಷಿಕೆ ಗೀತೆ ಇಂದು ಬಿಡುಗಡೆಯಾಗಿದೆ. “ಸೂತ್ರಧಾರಿ” ಚಿತ್ರದ “ಡ್ಯಾಶ್” ಸಾಂಗ್ ಅಂತೂ ನಿರೀಕ್ಷೆಗೂ ಮೀರಿ ಜನಪ್ರಿಯವಾಗಿದೆ. ಈ ಹಾಡು ಕೂಡ ಎಲ್ಲರಿಗೂ ಪ್ರಿಯವಾಗಲಿದೆ. ಉತ್ತಮ ತಂಡದೊಂದಿಗೆ ಕೆಲಸ ಮಾಡಿದ ಖುಷಿ ಇದೆ. ಈ ಚಿತ್ರದಲ್ಲಿ ನಾನು ನಾಯಕನಾಗಿ ನಟಿಸಲು ನವರಸನ್ ಅವರೆ ಮುಖ್ಯ ಕಾರಣ ಅವರಿಗೆ ವಿಶೇಷ ಧನ್ಯವಾದ ಎಂದರು ಚಂದನ್ ಶೆಟ್ಟಿ.
ಚಿತ್ರದ ನಿರ್ದೇಶಕ ಕಿರಣ್ ಕುಮಾರ್, ನಾಯಕಿ ಅಪೂರ್ವ, ನಟ ತಬಲ ನಾಣಿ ಹಾಗೂ ಹಾಡು ಬರೆದಿರುವ ವಿಜಯ್ ಈಶ್ವರ್ ಮುಂತಾದವರು “ಸೂತ್ರಧಾರಿ” ಕುರಿತು ಮಾತನಾಡಿದರು.