ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿ ನಡೆಯುತ್ತಿದ್ದಂತೆ, ದೇಶದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದೇ ನಡುವೆ ಪಾಕಿಸ್ತಾನ ರೇಂಜರ್ಸ್ ಭಾರತ ಗಡಿ ಭದ್ರತಾ ಪಡೆಯ (BSF) ಯೋಧನೊಬ್ಬನನ್ನು ವಶಕ್ಕೆ ತೆಗೆದುಕೊಂಡಿರುವ ಸುದ್ದಿ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಪಂಜಾಬ್ನ ಫಿರೋಝ್ಪುರ್ನ ಗಡಿಯ ಬಳಿ ಉಂಟಾದ ಈ ಘಟನೆ ಭಾರತ-ಪಾಕಿಸ್ತಾನ ಸಂಬಂಧಗಳಲ್ಲಿ ಮತ್ತಷ್ಟು ಗಂಭೀರತೆಗೆ ಕಾರಣವಾಗಿದೆ.
ಬುಧವಾರ, ಬಿಎಸ್ಎಫ್ನ 182ನೇ ಬೆಟಾಲಿಯನ್ಗೆ ಸೇರಿದ ಕಾನ್ಸ್ಟೇಬಲ್ ಪಿ.ಕೆ. ಸಿಂಗ್ ಫಿರೋಝ್ಪುರ್ ಗಡಿಯಲ್ಲಿ ಮೇಲ್ವಿಚಾರಣೆಯ ಕೆಲಸ ನಿರ್ವಹಿಸುತ್ತಿದ್ದರು. ಈ ಸಂದರ್ಭ ಅವರು ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಗಡಿಯನ್ನು ದಾಟಿದ್ದಾರೆ ಎದು ಹೇಳಲಾಗಿದೆ. ನಂತರ ಪಾಕಿಸ್ತಾನ ರೇಂಜರ್ಸ್ ಅವರನ್ನು ತಕ್ಷಣ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ವೇಳೆ ಅವರು ತಮ್ಮ ಸರ್ವಿಸ್ ರೈಫಲ್ ಸಹ ಹೊಂದಿದ್ದರೆಂದು ಮೂಲಗಳಿಂದ ತಿಳಿದು ಬಂದಿದೆ.
ಘಟನೆ ಕುರಿತು ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣ ಯೋಧನ ಬಿಡುಗಡೆಗೆ ಆಗ್ರಹಿಸಿದೆ. ಈ ಹಿನ್ನೆಲೆಯಲ್ಲಿ ಬಿಎಸ್ಎಫ್ನ ಹಿರಿಯ ಅಧಿಕಾರಿಗಳು ಗಡಿಗೆ ತೆರಳಿದ್ದು, ಪಾಕಿಸ್ತಾನ ರೇಂಜರ್ಸ್ ಜೊತೆ “ಫ್ಲಾಗ್ ಮೀಟಿಂಗ್” ಎಂಬ ಶಾಂತಿಯುತ ಚರ್ಚೆಯ ಮೂಲಕ ಯೋಧನ ಬಿಡುಗಡೆಗೆ ಪ್ರಯತ್ನಿಸುತ್ತಿದ್ದಾರೆ. “ಫ್ಲಾಗ್ ಮೀಟಿಂಗ್ ನಡೆಯುತ್ತಿದೆ ಮತ್ತು ನಮ್ಮ ಯೋಧನನ್ನು ಶೀಘ್ರದಲ್ಲೇ ಭಾರತಕ್ಕೆ ಹಿಂದಿರುಗಿಸಲಾಗುವುದು ಎಂಬ ವಿಶ್ವಾಸವಿದೆ,” ಎಂದು ಬಿಎಸ್ಎಫ್ ಪ್ರಕಟಣೆಯಲ್ಲಿ ತಿಳಿಸಿದೆ.
ಈ ನಡುವೆ, ಪಹಲ್ಗಾಮ್ನಲ್ಲಿ ನಡೆದ ಉಗ್ರ ದಾಳಿ ಕೂಡ ಭಾರತದ ಆಕ್ರೋಶಕ್ಕೆ ಕಾರಣವಾಗಿದೆ. ಉಗ್ರರನ್ನು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ದೇಶದ ಜನತೆ ಒತ್ತಾಯಿಸುತ್ತಿದ್ದಾರೆ. ಭಾರತ ಸರ್ಕಾರ ಈಗಾಗಲೇ ಪಾಕಿಸ್ತಾನದ ವಿರುದ್ಧ ಕಠಿಣ ನಿಲುವು ತಾಳಿದ್ದು, ಪಾಕಿಸ್ತಾನದ ರಾಜತಾಂತ್ರಿಕ ಸಂಪರ್ಕಗಳನ್ನು ಕಡಿತಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಬಿಎಸ್ಎಫ್ ಯೋಧನನ್ನು ವಶಕ್ಕೆ ತೆಗೆದುಕೊಳ್ಳುವ ಪಾಕಿಸ್ತಾನದ ಕ್ರಮಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇಂತಹ ಸಂದರ್ಭದಲ್ಲಿ ಪಾಕಿಸ್ತಾನದ ಈ ನಡೆ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರಲಿದೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.