ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ವಿರುದ್ಧ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹಕ್ಕುಚ್ಯುತಿ ಮಂಡಿಸಿದ ಪ್ರಸಂಗ ನಡೆಯಿತು. ಸೋಮವಾರ ಪ್ರಶ್ನೋತ್ತರ ಅವಧಿ ಮುಕ್ತಾಯದ ಬಳಿಕ ಪ್ರದೀಪ್ ಈಶ್ವರ್, ಸಂವಿಧಾನದ ಪೀಠಿಕೆಯನ್ನು ಉಲ್ಲೇಖಿಸಿ ಪ್ರತಿ ಪಕ್ಷದನಾಯಕ ಅಶೋಕ್ ಅವರು, ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ಹೊಸದಾಗಿ ಶಾಸಕನಾಗಿರುವ ತಮ್ಮ ಬಗ್ಗೆ ಅಶೋಕ್ ಹೇಳಿಕೆಯು ಮನಸ್ಸಿಗೆ ನೋವುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತಿದ್ದೇನೆ ಎಂದರು. ಸಭಾಧ್ಯಕ್ಷ ಯು.ಟಿ ಖಾದರ್ ಪ್ರತಿಕ್ರಿಯಿಸಿ, ವಿಧಾನಸಭೆಯಲ್ಲಿ ನಡೆದಿರುವ ವಿಚಾರಕ್ಕೆ ಸೀಮಿತವಾಗಿ ಮಾತನಾಡಿ ಎಂದು ಹೇಳಿ ವಿಷಯ ಪ್ರಸ್ತಾಪಕ್ಕೆ ಅವಕಾಶ ನೀಡಿದರು. ಬಳಿಕ ಅಶೋಕ್ ಮಾತನಾಡಿ, ಬಿಜೆಪಿ-ಜೆಡಿಎಸ್ ಧರಣಿ ನಡೆಸುವಾಗ ಪ್ರದೀಪ್ ಈಶ್ವರ್ ಮಾತನಾಡಿದರು, ಆಗ ಅವಾಚ್ಯ ಶಬ್ದ ಬಳಕೆ ಮಾಡಿರುವುದಾಗಿ ಹೇಳಿದ್ದಾರೆ. ದಾಖಲೆಗಳಲ್ಲಿ ಆ ರೀತಿ ಪದ ಬಳಕೆ ಮಾಡಿರುವುದು ಇಲ್ಲ. ಒಂದು ವೇಳೆ ಆ ರೀತಿ ಪದ ಬಳಕೆ ಮಾಡಿದ್ದರೆ ಕಡತದಿಂದ ತೆಗೆಸಿ ಹಾಕಿ. ತಪ್ಪಾಗಿದ್ದರೆ ಅದು ತಪ್ಪೇ ಎಂದರು. ಸಭಾಧ್ಯಕ್ಷರು, ಆಡಿಯೋ, ವಿಡಿಯೋ ಮತ್ತು ದಾಖಲೆ ಪರಿಶೀಲನೆ ಮಾಡಿ ಹಕ್ಕುಚ್ಯುತಿ ಮಂಡನೆ ವಿಚಾರದ ಬಗ್ಗೆ ರೂಲಿಂಗ್ ಕೊಡುವುದಾಗಿ ಹೇಳಿದರು.