ಐಟಿ ಕಂಪನಿಗಳಲ್ಲಿ 14 ಗಂಟೆ ಕೆಲಸದ ಅವಧಿ ನಿಗದಿಪಡಿಸುವ ವಿಚಾರವಾಗಿ ಸಿಡಿದೆದ್ದಿರುವ ಐಟಿ ವೃತ್ತಿಪರರು ಇದೀಗ ಮೇಲ್ ಅಭಿಯಾನ ಶುರು ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ‘I oppose the Increase in Working Hours’ ಎಂಬ ಮೇಲ್ ಮಾಡಲು ಆರಂಭಿಸಿದ್ದಾರೆ. ಐಟಿ ಕಂಪನಿ ಉದ್ಯೋಗಿಗಳಿಂದ 14 ಗಂಟೆ ಕೆಲಸ ನಿರ್ವಹಿಸುವ ನೂತನ ಪ್ರಸ್ತಾವದ ವಿರುದ್ಧ ಕರ್ನಾಟಕದ ಐಟಿ ವೃತ್ತಿಪರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಕಾರ್ಮಿಕ ಸಚಿವರಿಗೆ ಸಾಮೂಹಿಕವಾಗಿ ಮೇಲ್ ಮಾಡುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಮೇಲ್ ಮೂಲಕವೇ ಸರ್ಕಾರದ ವಿರುದ್ಧ ಸಮರ ಸಾರಲು ಐಟಿ ವೃತ್ತಿಪರರು ತೀರ್ಮಾನ ಮಾಡಿದ್ದಾರೆ.
ಪ್ರಸ್ತಾವನೆ ಜಾರಿಯಾದರೆ ತಮ್ಮ ಕುಟುಂಬಗಳಿಗಾಗುವ ಸಮಸ್ಯೆ, ಅಷ್ಟೇ ಅಲ್ಲದೆ ತಮಗೆ ಆಗಬಹುದಾದ ಸಮಸ್ಯೆಗಳ ಬಗ್ಗೆ ಮೇಲ್ ಸಂದೇಶದಲ್ಲಿ ಉಲ್ಲೇಖಿಸಲು ಕರ್ನಾಟಕ ರಾಜ್ಯ ಐಟಿ ಮತ್ತು ಐಟಿಇಎಸ್ ಎಂಪ್ಲಾಯೀಸ್ ಯೂನಿಯನ್ ಉದ್ಯೋಗಿಗಳಲ್ಲಿ ಮನವಿ ಮಾಡಿದೆ. ‘I oppose the Increase in Working Hours (ಕೆಲಸದ ಅವಧಿ ವಿಸ್ತರಣೆಯನ್ನು ನಾನು ವಿರೋಧಿಸುತ್ತೇನೆ)’ ಎಂಬ ಬರಹದ ಜತೆ ಮೇಲ್ ಮಾಡಲು ಸಲಹೆ ನೀಡಲಾಗಿದೆ. ಈಗಾಗಲೇ ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಿಎಂ ಸಿದ್ದರಾಮಯ್ಯಗೆ ಸಹಸ್ರಾರು ಸಂಖ್ಯೆಯಲ್ಲಿ ಮೇಲ್ ಸಂದೇಶಗಳು ಬಂದಿವೆ. ಸಾಮಾಜಿಕ ಜಾಲತಾಣ ಎಕ್ಸ್ ಹಾಗೂ ಫೇಸ್ಬುಕ್ನಲ್ಲಿ ಕೂಡ ಐಟಿ ನೌಕರರ ಕ್ಯಾಂಪೇನ್ ಟ್ರೆಂಡ್ ಆಗುತ್ತಿದೆ.