ಈ ಬಾರಿಯ ಬಜೆಟ್ ನಲ್ಲಿ ಯಾವುದೇ ರಾಜ್ಯವನ್ನು ಕಡೆಗಣಿಸಿಲ್ಲ. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಉದ್ದೇಶಪೂರ್ವಕವಾಗಿ ನಾಗರಿಕರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರಾಜ್ಯಗಳ ನಡುವೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಬಜೆಟ್ನಲ್ಲಿ ಈ ದೇಶದ ಪ್ರತಿಯೊಂದು ರಾಜ್ಯವನ್ನು ಹೆಸರಿಸಲು ಅವಕಾಶ ಸಿಗುವುದಿಲ್ಲ. ಈ ಪ್ರತಿಭಟನೆ ದುರುದ್ದೇಶದಿಂದ ಕೂಡಿದೆ ಎಂದರು. ಭಾಷಣದಲ್ಲಿ ನಿರ್ದಿಷ್ಟ ರಾಜ್ಯವನ್ನು ಹೆಸರಿಸದಿದ್ದರೆ, ಭಾರತ ಸರ್ಕಾರದ ಕಾರ್ಯಕ್ರಮಗಳು ಈ ರಾಜ್ಯಗಳಿಗೆ ಹೋಗುವುದಿಲ್ಲ ಎಂದರ್ಥವೇ? ಇದು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಉದ್ದೇಶಪೂರ್ವಕ ಪ್ರಯತ್ನವಾಗಿದೆ. ನಮ್ಮ ರಾಜ್ಯಗಳಿಗೆ ಏನನ್ನೂ ನೀಡಿಲ್ಲ ಎಂಬ ಭಾವನೆ ಜನರಲ್ಲಿ ಮೂಡಿಸಲು ಹೀಗೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.