ಕಳೆದ ಎರಡೂವರೆ ವರ್ಷದಿಂದ ಪ್ರೀತಿಸುತ್ತಿದ್ದ ಯುವಕ ತನ್ನ ಪ್ರಿಯತಮೆಯನ್ನೇ ಕತ್ತುಹಿಸುಕಿ ಕೊಲೆ ಮಾಡಿರುವ ಭೀಕರ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮದಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಸೌಮ್ಯ ಕೊಲೆಯಾದವಳು. ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಆರೋಪಿ ಸೃಜನ್ನನ್ನು ಪೊಲೀಸರು ಬಂಧಿಸಿದ್ದಾರೆ.
ತೀರ್ಥಹಳ್ಳಿಯಲ್ಲಿ ಖಾಸಗಿ ಫೈನಾನ್ಸ್ ವೊಂದರಲ್ಲಿ ಕೆಲಸ ಮಾಡ್ತಿದ್ದ ಸೃಜನ್ ಕೊಪ್ಪಗೆ ಹಣ ವಸೂಲಿಗೆ ಹೋಗುತ್ತಿದ್ದ. ಈ ವೇಳೆ ನರ್ಸಿಂಗ್ ವ್ಯಾಸಂಗ ಮಾಡ್ತಿದ್ದ ಸೌಮ್ಯಾಳ ಪರಿಚಯವಾಗಿತ್ತು. ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರದ್ದು ಬೇರೆ ಬೇರೆ ಸಮುದಾಯವಾಗಿದ್ದರಿಂದ ಸೃಜನ್ ಮನೆಯಲ್ಲಿ ಮದುವೆಗೆ ನಿರಾಕರಿಸಿದ್ದರು. ಇದೇ ವೇಳೆ ಯುವತಿ ಸೌಮ್ಯ ತೀರ್ಥಹಳ್ಳಿಗೆ ಹೋಗುತ್ತೇನೆ ಎಂದು ಮನೆಯಲ್ಲಿ ಹೇಳಿ ಜುಲೈ 2 ರಂದು ಕೊಪ್ಪದಿಂದ ತೀರ್ಥಹಳ್ಳಿಗೆ ಬಂದಿದ್ದಳು. ಬಳಿಕ ತನ್ನ ಪ್ರಿಯತಮನನ್ನು ಭೇಟಿ ಮಾಡಿ ಮನೆಗೆ ಕರೆದುಕೊಂಡು ಹೋಗುವಂತೆ ಒತ್ತಡ ಹಾಕಿದ್ದಾಳೆ. ಮತ್ತು ಕೊಲೆಯಾದ ಸೌಮ್ಯ ಮದುವೆಯಾಗುವಂತೆ ಸೃಜನ್ನನ್ನು ಪೀಡಿಸುತ್ತಿದ್ದಳು.
ಯುವತಿಯಿಂದ ಒತ್ತಡ ಹೆಚ್ಚಾದ ಹಿನ್ನೆಲೆ ಕೋಪಗೊಂಡ ಸೃಜನ್ ಪ್ರಿಯತಮೆಯ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಇನ್ನು ಸೃಜನ್ ಕೊಲೆ ಮಾಡಿ ಮೃತದೇಹವನ್ನು ಶಿವಮೊಗ್ಗದ ಮುಂಬಾಳು ಗ್ರಾಮದ ಬಳಿ ಹೂತಿಟ್ಟಿದ್ದನು.
ಯುವತಿಯ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದು, ಪೊಲೀಸರು ಯುವಕನನ್ನು ಹುಡುಕಿಕೊಂಡು ಸಾಗರಕ್ಕೆ ಬಂದಿದ್ದು ಯುವತಿಯನ್ನು ಕೊಂದು ಹೂತಿಟ್ಟ ರಹಸ್ಯವನ್ನು ಸೃಜನ್ ಪೊಲೀಸರ ಎದುರು ಬಿಚ್ಚಿಟ್ಟಿದ್ದಾನೆ. ಇಂದು ಎಸಿ ಸಮ್ಮುಖದಲ್ಲಿ ಯುವತಿಯ ಶವ ಹೊರಗೆ ತೆಗೆಯಲು ಸಿದ್ದತೆ ನಡೆಯುತ್ತಿದೆ. ಸ್ಥಳದಲ್ಲಿ ಪೊಲೀಸರು ಮೊಕ್ಕಂ ಹೂಡಿದ್ದಾರೆ.