ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಮಗಳಿಗೆ ಈಜು ಕಲಿಸಲು ಹೋಗಿದ್ದ ತಂದೆ ಮತ್ತು ಮಗಳು ಕೆರೆಯಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರು ನಾಗೇಶ್ (42) ಮತ್ತು ಅವರ ಮಗಳು ಧನುಶ್ರೀ (12) ಎಂದು ಗುರುತಿಸಲಾಗಿದೆ.
ನಾಗೇಶ್ ತಮ್ಮ ಮಗಳು ಧನುಶ್ರೀಗೆ ಈಜು ಕಲಿಸಲು ಕೆರೆಗೆ ತೆರಳಿದ್ದರು. ಆದರೆ, ಕೆರೆಯಲ್ಲಿ ಹೂಳು ತುಂಬಿರುವುದರಿಂದ ಇಬ್ಬರೂ ಹಳಿಯಲ್ಲಿ ಸಿಲುಕಿಕೊಂಡು ದುರಂತಕ್ಕೀಡಾಗಿದ್ದಾರೆ. ಈ ಘಟನೆಯಲ್ಲಿ ತಂದೆ-ಮಗಳಿಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ. ಧನುಶ್ರೀ ಭರತನಾಟ್ಯ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಳು.
ಘಟನೆಯ ನಂತರ ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸುದ್ದಿ ತಿಳಿದ ಸಂಬಂಧಿಕರ ಆಕ್ರಂದನಮುಗಿಲು ಮುಟ್ಟಿ.
ಈ ಸಂದರ್ಭದಲ್ಲಿ ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ದುರ್ಘಟನೆಯಿಂದ ಶೆಟ್ಟಿಹಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ಮನೆ ಮಾಡಿದೆ.
ಕೆರೆಯಲ್ಲಿ ಈಜಲು ತೆರಳಿದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವು
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದ ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ದುರ್ಮರಣಕ್ಕೀಡಾದ ಘಟನೆ ನಡೆದಿದೆ.
ಬಾಲಕರಿಬ್ಬರು ಕೆರೆಯಲ್ಲಿ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ವೃಷಬೇಂದ್ರ(14) ನ ಶವ ಪತ್ತೆಯಾಗಿದ್ದು, ಅಭಯಗೌಡ(13)ನ ಶವಕ್ಕಾಗಿ ಶೋಧ ಕಾರ್ಯ ಇನ್ನೂ ಮುಂದುವರಿದಿದೆ.
ಈ ಘಟನೆ ಯಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.