ವಿಜಯನಗರಂ (ಆಂಧ್ರಪ್ರದೇಶ): ಶಾಲೆ ಮತ್ತು ಕಾಲೇಜುಗಳಲ್ಲಿ ಶಿಕ್ಷಕರಿಗೆ ದೇವರಂತೆಯೇ ಗೌರವ ನೀಡಲಾಗುತ್ತದೆ. ಆದರೆ ಇಲ್ಲೊಬ್ಬಳು ವಿದ್ಯಾರ್ಥಿನಿ ತನ್ನ ಚಪ್ಪಲಿಯಲ್ಲೇ ತನ್ನ ಗುರುವಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಈ ದುರ್ಘಟನೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ರಘು ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ.
ತರಗತಿಯಲ್ಲಿ ಇದ್ದಾಗ ವಿದ್ಯಾರ್ಥಿನಿಯೊಬ್ಬಳು ತನ್ನ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಿದ್ದಳು. ಇದು ಗಮನಿಸಿದ ಶಿಕ್ಷಕಿ ಆಕೆಯಿಂದ ಫೋನನ್ನು ಕಸಿದುಕೊಂಡರು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿ ತಕ್ಷಣವೇ ಶಿಕ್ಷಕಿಯೊಂದಿಗೆ ವಾದ ಆರಂಭಿಸಿದರು. ವಾಗ್ವಾದ ತೀವ್ರಗೊಂಡು ಹಲ್ಲೆ ಮಾಡಿದ್ದಾಳೆ. ವಿದ್ಯಾರ್ಥಿನಿ ಶಿಕ್ಷಕಿಯ ಜಡೆ ಹಿಡಿದು, ಎಲ್ಲರ ಮುಂದೆ ಚಪ್ಪಲಿಯಿಂದ ಬಾರಿಸಿದರು.
ಈ ಆಘಾತಕಾರಿ ದೃಶ್ಯ ಕಾಲೇಜಿನ ಕ್ಯಾಂಪಸ್‌ನಲ್ಲಿ ನೂರಾರು ವಿದ್ಯಾರ್ಥಿಗಳ ಮುಂದೇ ನಡೆದಿದ್ದು, ಅದೇ ವೇಳೆ ಅಲ್ಲಿ ಹಾಜರಿದ್ದ ವಿದ್ಯಾರ್ಥಿಯೊಬ್ಬರು ಮೊಬೈಲ್ ಫೋನಿನಲ್ಲಿ ಈ ಘಟನೆಯನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಹಲವರು ವಿಡಿಯೋ ನೋಡಿ ಆಶ್ಚರ್ಯ ಮತ್ತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Happened in Raghu Engineering college of Vzm district of AP – a teacher snatched mobile from a student- a brawl happened in college campus. Mistakes is on the both sides – handling the situation is not right —- skill development is most important , value based education is… pic.twitter.com/xA29TbowuS
— Dr Srinubabu Gedela (@DrSrinubabu) April 22, 2025
ವೈರಲ್ ವಿಡಿಯೋದಲ್ಲಿ ವಿದ್ಯಾರ್ಥಿನಿ ಶಿಕ್ಷಕಿಗೆ ಅವಾಚ್ಯ ಶಬ್ದಗಳನ್ನು ಉಪಯೋಗಿಸುತ್ತಿರುವುದೂ ಸ್ಪಷ್ಟವಾಗಿ ಕೇಳಿ ಬರುತ್ತದೆ. ಈ ವಿಡಿಯೋವನ್ನು @DrSrinubabu ಎಂಬ ಟ್ವಿಟರ್ ಖಾತೆಯಿಂದ ಹಂಚಲಾಗಿದ್ದು, ಅಲ್ಪ ಸಮಯದಲ್ಲೇ ಸಾವಿರಾರು ಜನರು ವೀಕ್ಷಿಸಿದ್ದಾರೆ ಮತ್ತು ಇದಕ್ಕೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ರಘು ಎಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ತಕ್ಷಣವೇ ವಿಚಾರಣೆ ನಡೆಸಿತು. ತನಿಖೆಯಲ್ಲಿ ವಿದ್ಯಾರ್ಥಿನಿಯು ಶಿಕ್ಷಕಿಯ ವಿರುದ್ಧ ಹಲ್ಲೆ ನಡೆಸಿದ್ದು ದೃಢಪಟ್ಟಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಡಳಿತ ಮಂಡಳಿ ತಕ್ಷಣವೇ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಅಮಾನತುಗೊಳಿಸಿದೆ.