ಭೂಕಂಪ, ಸುನಾಮಿ ಮತ್ತು ಕಲಿಯುಗ ಅಂತ್ಯದ ಬಗ್ಗೆ ಹಲವಾರು ಜ್ಯೋತಿಷಿಗಳು ಭವಿಷ್ಯ ನುಡಿಯುತ್ತಲೇ ಬಂದಿದ್ದಾರೆ. ಬಾಬಾ ವಂಗಾದಂತಹ ಪ್ರಸಿದ್ಧ ಭವಿಷ್ಯರಿಂದ ಹಿಡಿದು ಅನೇಕರು ಭವಿಷ್ಯವಾಣಿಗಳನ್ನು ನೀಡುತ್ತಿದ್ದಾರೆ. ಇದೀಗ ಮ್ಯಾನ್ಮಾರ್ ದೇಶದಲ್ಲಿ ಭೂಮಿ ಮುಳುಗುವುದು ಎಂದು ಸುಳ್ಳು ಭವಿಷ್ಯ ನುಡಿಯಿದ ಟಿಕ್‌ಟಾಕ್ ಜ್ಯೋತಿಷಿ ಜಾನ್ ಮೋ ಅವರನ್ನು ಬಂಧಿಸಲಾಗಿದೆ.
ಜಾನ್ ಮೋ ಎಂಬ 21 ವರ್ಷದ ಯುವಕ ಟಿಕ್‌ಟಾಕ್‌ನಲ್ಲಿ 3,00,000ಕ್ಕಿಂತ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದ. ಮಾರ್ಚ್ 28ರಂದು ಮ್ಯಾನ್ಮಾರ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪದಲ್ಲಿ 3500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ಭೀಕರ ಘಟನೆಯ ಎರಡು ವಾರಗಳ ಬಳಿಕ, ಜಾನ್ ಮೋ ಏಪ್ರಿಲ್ 21 ರಂದು ಮತ್ತೊಮ್ಮೆ ಭೂಕಂಪ ಸಂಭವಿಸಲಿದೆ ಎಂದು ಭವಿಷ್ಯವಾಣಿ ನುಡಿದು, ವಿಡಿಯೋ ಪೋಸ್ಟ್ ಮಾಡಿದರು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಯಿತು ಮತ್ತು ಇದರಿಂದ ಜನರಲ್ಲಿ ಭಯ ಮತ್ತು ಗೊಂದಲ ಉಂಟಾಯಿತು.
ಅದರಿಂದ ಉದ್ಭವಿಸಿದ ಆತಂಕದ ಹಿನ್ನೆಲೆಯಲ್ಲಿ, ಮ್ಯಾನ್ಮಾರ್ ಅಧಿಕಾರಿಗಳು ಏಪ್ರಿಲ್ 9 ರಂದು ಜಾನ್ ಮೋ ಅವರ ನಿವಾಸದಲ್ಲಿ ದಾಳಿ ನಡೆಸಿ ಬಂಧಿಸಿದರು. ಆರೋಪಗಳ ಪ್ರಕಾರ, ಅವರು “ಸಾರ್ವಜನಿಕರಲ್ಲಿ ಭಯ ಹುಟ್ಟಿಸಲು ಸುಳ್ಳು ಮಾಹಿತಿಯನ್ನು ಹರಡಿದರು”. ಜಾನ್ ಮೋ ಅವರು ತಮ್ಮ ವಿಡಿಯೋದಲ್ಲಿ, “ಏಪ್ರಿಲ್ 21ರಂದು ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಮ್ಯಾನ್ಮಾರ್‌ನ ಪ್ರತಿಯೊಂದು ನಗರದಲ್ಲಿ ಭೂಕಂಪ ಸಂಭವಿಸುತ್ತದೆ” ಎಂದು ಭವಿಷ್ಯ ನುಡಿಸಿದ್ದರು. ಜನರಿಗೆ “ಮುಖ್ಯ ವಸ್ತುಗಳನ್ನು ಜೊತೆಗೆ ತೆಗೆದುಕೊಂಡು ಕಟ್ಟಡಗಳಿಂದ ಓಡಿ ಹೋಗಿ” ಎಂದು ಸಲಹೆ ನೀಡಿದರು.
ಅವರ ಹೇಳಿಕೆಗಳು ಯಾವುದೇ ವೈಜ್ಞಾನಿಕ ದೃಢೀಕರಣವಿಲ್ಲದೆ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದವು. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ಅಥವಾ ಯಾವುದೇ ವಿಜ್ಞಾನ ಸಂಸ್ಥೆ ಮ್ಯಾನ್ಮಾರ್‌ನಲ್ಲಿ ದೊಡ್ಡ ಭೂಕಂಪ ಸಂಭವಿಸಬಹುದು ಎಂದು ಮುನ್ಸೂಚನೆ ನೀಡಿರಲಿಲ್ಲ. ಇದರ ಜತೆಗೆ, ಅವರ ಭವಿಷ್ಯವಾಣಿ ಮಾಡಿದ ದಿನದಂದು ಯಾವುದೇ ಭೂಕಂಪ ಸಂಭವಿಸಿಯೂ ಇಲ್ಲ.
ಜಾನ್ ಮೋ ಅವರ ಈ ಸುಳ್ಳು ಭವಿಷ್ಯವಾಣಿಯಿಂದ ಜನರ ಮಧ್ಯೆ ಆತಂಕದ ವಾತಾವರಣ ನಿರ್ಮಾಣವಾಯಿತು. ಯಾಂಗೂನ್‌ನ ಹಲವಾರು ನಿವಾಸಿಗಳು ತಮ್ಮ ಮನೆ ಬಿಟ್ಟು ಹೊರಾಂಗಣದಲ್ಲಿ ತಂಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಅನೇಕರು ತಮ್ಮ ಶ್ರೇಯಸ್ಸಿಗಾಗಿ ಮೊದಲೇ ಮನೆಬಿಟ್ಟು ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು. ಅವರ ಮಾತುಗಳನ್ನು ನಂಬಿದವರು ಅನೇಕರಿದ್ದರು.
ಜಾನ್ ಮೋ ಅವರ ಟಿಕ್‌ಟಾಕ್ ಖಾತೆ ಈಗ ನಿಷ್ಕ್ರಿಯಗೊಂಡಿದೆ. ಆದರೆ ಅವರು ಜ್ಯೋತಿಷ್ಯ ಆಧಾರದ ಮೇಲೆ ಹಲವಾರು ಭವಿಷ್ಯವಾಣಿಗಳನ್ನು ನೀಡುತ್ತಿದ್ದರು. ಅವರು ವಾಸವಿದ್ದ ಮಂಡಲೆ ಮತ್ತು ಸಾಗೈಂಗ್ ಪ್ರದೇಶಗಳು ಕಳೆದ ಭೂಕಂಪದಿಂದ ತೀವ್ರ ಹಾನಿಗೊಳಗಾಗಿದ್ದ ಕಾರಣ, ಸ್ಥಳೀಯರಲ್ಲಿ ಭಯ ಇನ್ನೂ ಹೆಚ್ಚಾಗಿತ್ತು.
ಮ್ಯಾನ್ಮಾರ್ ಸರ್ಕಾರ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.