ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪೊಲೀಸ್ ಅಕ್ರಮ ಚಟುವಟಿಕೆ ಹಾಗೂ ಕಳ್ಳತನ ಮಾಡುವವರ ಹೆಡೆಮರಿ ಕಟ್ಟುತ್ತಿದ್ದು, ಇಂದು ಬೆಳ್ಳಂಬೆಳಗ್ಗೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸರ ಬಂದೂಕು ಸದ್ದು ಮಾಡಿದೆ. ಕುಖ್ಯಾತ ಅಂತರಾಜ್ಯ ಕಳ್ಳತನದ ಆರೋಪಿ ಫರ್ಹಾನ್ ಅಹ್ಮದ್ ತಂಡವನ್ನು ಹಿಡಿಯುವ ಯತ್ನದಲ್ಲಿ ಪೊಲೀಸರು ಫರ್ಹಾನ್ ಕಾಲಿಗೆ ಫೈರ್ ಮಾಡಿದ್ದಾರೆ.
ಮುಂಬೈ ಮೂಲದ ಫರ್ಹಾನ್ ಶೇಖ್ ವಿರುದ್ಧ ಕೇಶ್ವಾಪುರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಗಾರದ ಆಭರಣ ಅಂಗಡಿ ಕಳ್ಳತನದ ಪ್ರಕರಣ ದಾಖಲಾಗಿದೆ. ಇದಲ್ಲದೇ ಹೈದರಾಬಾದ್, ಗುಲ್ಬರ್ಗ, ಅಹ್ಮದ್ ನಗರ, ಸೂರತ್ ಮತ್ತು ಮುಂಬೈನಲ್ಲಿ ರಾಬರಿ ಹಾಗೂ ಕೊಲೆ ಯತ್ನ ಪ್ರಕರಣಗಳು ಈತನ ಮೇಲಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ದಿನಗಳಿಂದ ಈತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಅದರಂತೆ ಕೇಶ್ವಾಪುರ ಪೊಲೀಸರು ಕಳ್ಳತನದ ಪ್ರಕರಣವೊಂದರಲ್ಲಿ ಗುರುವಾರ ರಾತ್ರಿ ಫರ್ಹಾನನ್ನು ಬಂಧಿಸಿದ್ದು, ಇಂದು ಈತನ ಇತರ ಸಹಚರರನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.
ಈ ವೇಳೆ ಹುಬ್ಬಳ್ಳಿಯ ಹೊರವಲಯದ ಗಾಮನಗಟ್ಟಿ ರಸ್ತೆ ಬಳಿಯ ತಾರಿಹಾಳ ಕ್ರಾಸ್ ಬಳಿಯಲ್ಲಿ ಆರೋಪಿ ಫರ್ಹಾನ್ ಶೇಖ್ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ವೇಳೆ, ಪೊಲೀಸರು ತಮ್ಮ ಆತ್ಮರಕ್ಷಣೆಗೆ ಮುಂದಾಗಿ ಕೇಶ್ವಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಕವಿತಾ ಮಾಡಗ್ಯಾಳ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದು, ನಂತರ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಪರಿಣಾಮ ಫರ್ಹಾನ್ ಕಾಲಿಗೆ ಗುಂಡು ತಲುಗಿದ್ದು, ಸದ್ಯ ಆರೋಪಿಯನ್ನು ಪೊಲೀಸರು ಕಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇತ್ತ ಪೊಲೀಸರ ಮೇಲೆ ಹಲ್ಲೆಯಿಂದ ಗಾಯಗೊಂಡ ಸಿಬ್ಬಂದಿಗಳನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.