ಬೆಂಗಳೂರು : ಬಹುಕಾಲದಿಂದ ಬಾಕಿ ಉಳಿದಿರುವ ಬೆಂಗಳೂರು – ಎರ್ನಾಕುಲಂ ವಂದೇ ಭಾರತ್ ಎಕ್ಸ್ಪ್ರೆಸ್ ಜುಲೈ 31 ರಂದು ಪ್ರಾರಂಭವಾಗಲಿದೆ ಎಂದು ದಿ ಹಿಂದೂ ವರದಿ ಮಾಡಿದೆ. ಇದು ವಾರಕ್ಕೆ ಮೂರು ದಿನದ ವಿಶೇಷ ರೈಲು ಆಗಿದ್ದು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ವರದಿಯ ಪ್ರಕಾರ, ಎಂಟು ಬೋಗಿಗಳ ಸೆಮಿ-ಹೈ-ಸ್ಪೀಡ್ ರೈಲು ಎರ್ನಾಕುಲಂ ಜಂಕ್ಷನ್ (ERS) ನಿಂದ 12:50 ಕ್ಕೆ ಹೊರಡಲಿದೆ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವನ್ನು ರಾತ್ರಿ 10 ಗಂಟೆಗೆ ತಲುಪುತ್ತದೆ. ಈ ಸೇವೆಯು ಎರ್ನಾಕುಲಂನಿಂದ ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ಪ್ರತಿ ವಾರ ಲಭ್ಯವಿರುತ್ತದೆ.
ಇನ್ನು, ಬೆಂಗಳೂರು – ಎರ್ನಾಕುಲಂ ವಂದೇ ಭಾರತ್ ಎಕ್ಸ್ಪ್ರೆಸ್, ಬೆಂಗಳೂರು ಕಂಟೋನ್ಮೆಂಟ್ನಿಂದ ರೈಲು ಬೆಳಗ್ಗೆ 5:30 ಕ್ಕೆ ಹೊರಡಲಿದ್ದು, ಮಧ್ಯಾಹ್ನ 2.20 ಕ್ಕೆ ಎರ್ನಾಕುಲಂ ತಲುಪಲಿದೆ. ಈ ಸೇವೆಯು ಪ್ರತಿ ವಾರ ಗುರುವಾರ, ಶನಿವಾರ ಮತ್ತು ಸೋಮವಾರ ಲಭ್ಯವಿರುತ್ತದೆ. ಬೆಂಗಳೂರು – ಎರ್ನಾಕುಲಂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ತ್ರಿಶೂರ್, ಪಾಲಕ್ಕಾಡ್, ಪೊದನ್ನೂರ್, ತಿರುಪುರ್, ಈರೋಡ್ ಮತ್ತು ಸೇಲಂನಲ್ಲಿ ಎರ್ನಾಕುಲಂ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ನಿಲುಗಡೆ ನೀಡಲಿದೆ. ಇನ್ನು, ಈ ವಂದೇ ಭಾರತ್ ಎಕ್ಸ್ಪ್ರೆಸ್ ಕಳೆದ ದೀಪಾವಳಿಯ ಸಮಯದಲ್ಲಿ ಆರಂಭವಾಗಬೇಕಿತ್ತು. ಆದರೆ ಹಲವಾರು ಕಾರಣಗಳಿಂದ ಪ್ರಾರಂಭ ಮುಂದೂಡಲಾಗಿತ್ತು.
ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರಾಜಧಾನಿಯಿಂದ ಸರಿಸುಮಾರು 500 ಕಿಲೋಮೀಟರ್ ದೂರದಲ್ಲಿರುವ ತ್ರಿಶೂರ್ ಮತ್ತು ಎರ್ನಾಕುಲಂ ಪ್ರದೇಶದಿಂದ ಬೆಂಗಳೂರಿಗೆ ಆಗಾಗ್ಗೆ ಪ್ರಯಾಣಿಸುವ ಜನರಿಗೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ಅನೇಕ ಸರ್ಕಾರಿ ಅಧಿಕಾರಿಗಳು ಈ ಸೇವೆಯಿಂದ ಪ್ರಯೋಜನ ಪಡೆಯುತ್ತಾರೆ. ಬೆಂಗಳೂರು ಮೈಸೂರು, ಚೆನ್ನೈ, ಹೈದರಾಬಾದ್, ಧಾರವಾಡ ಮತ್ತು ಕೊಯಮತ್ತೂರುಗಳಿಗೆ ವಂದೇ ಭಾರತ ಎಕ್ಸ್ಪ್ರೆಸ್ ರೈಲು ಸೇವೆ ನೀಡುತ್ತಿದೆ.