ಮಾಜಿ ಸಚಿವ, ಶಾಸಕ ವಿನಯ್ ಕುಲಕರ್ಣಿ ಶನಿವಾರ ಕೊರಗಜ್ಜನ ಕಟ್ಟೆಗೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಸಂಕಷ್ಟ ಪರಿಹಾರ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ದೈವಕ್ಕೆ ಹರಕೆ ಕೋಲ ಸೇವೆ ಸಲ್ಲಿಸಿದರು. ಈ ವೇಳೆ ಮಾತನಾಡಿ, ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕರು ಹಾಗೂ ಮಂಗಳೂರಿನ ಸ್ನೇಹಿತರು ಕೋಲ ಸೇವೆ ಬಗ್ಗೆ ತಿಳಿಸಿದ್ದರು. ಈಗ ಕಾಲ ಕೂಡಿ ಬಂದಿದ್ದು, ಸೇವೆಯಲ್ಲಿ ಭಾಗಿಯಾಗಿದ್ದೇನೆ ಎಂದರು. ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ್ಗೌಡ ಹತ್ಯೆ ಕೇಸಲ್ಲಿ ಆರೋಪಿಯಾಗಿರುವ ವಿನಯ್ ಧಾರವಾಡ ಕ್ಷೇತ್ರ ಪ್ರವೇಶ ಮಾಡದಂತೆ ಸಿಬಿಐ ನ್ಯಾಯಾಲಯ ನಿರ್ಬಂಧ ಹೇರಿದೆ. ಈ ಕುರಿತು ಕೊರಗಜ್ಜನ ಬಳಿ ಅವರು ಅರಿಕೆ ಮಾಡಿಕೊಂಡಿದ್ದು, ಮುಂದಿನ ತಿಂಗಳು ನ್ಯಾಯಾಲಯದಲ್ಲಿ ತೀರ್ಪು ಇದೆ. ಮಗನಿಗೆ ಅಪಘಾತವಾಗಿ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಹೇಳಿಕೊಂಡಿದ್ದಾರೆ. ಸಂಕಷ್ಟ ನಿವಾರಿಸುವ ಬಗ್ಗೆ ದೈವ ಅಭಯ ನೀಡಿದ್ದು, ತಪ್ಪು ಮಾಡೋದು ಸಹಜ. ತಿದ್ದಿಕೊಂಡು ಮುನ್ನಡೆಯಬೇಕು ಎಂದು ತಿಳಿಸಿದ್ದಾಗಿ ತಿಳಿದುಬಂದಿದೆ.