ಮಹಿಳಾ ಏಷ್ಯಾಕಪ್ 2024ರ ಫೈನಲ್ ಪಂದ್ಯವು ಇಂದು ನಡೆಯಲಿದೆ. ದಂಬುಲ್ಲಾದ ರಂಗಿರಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿದೆ. ಮೊದಲ ಸೆಮಿಫೈನಲ್ನಲ್ಲಿ ಬಾಂಗ್ಲಾದೇಶ್ ವಿರುದ್ಧ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಟೀಮ್ ಇಂಡಿಯಾ ಫೈನಲ್ಗೆ ಪ್ರವೇಶಿಸಿದರೆ, ಅತ್ತ ಶ್ರೀಲಂಕಾ ತಂಡವು ಎರಡನೇ ಸೆಮಿಫೈನಲ್ನಲ್ಲಿ ಪಾಕಿಸ್ತಾನ್ ವಿರುದ್ಧ 3 ವಿಕೆಟ್ಗಳ ಗೆಲುವು ದಾಖಲಿಸಿ ಅಂತಿಮ ಹಂತಕ್ಕೇರಿದೆ. ಅದರಂತೆ ಇಂದು ನಡೆಯಲಿರುವ ಪ್ರಶಸ್ತಿ ಸುತ್ತಿನಲ್ಲಿ ಏಷ್ಯಾದ ಬಲಿಷ್ಠ ಮಹಿಳಾ ತಂಡಗಳು ಮುಖಾಮುಖಿಯಾಗಲಿದೆ.
ಮಹಿಳಾ ಏಷ್ಯಾಕಪ್ ಶುರುವಾದಾಗಿಂದ ಭಾರತ ತಂಡವು ಪ್ರತಿ ಬಾರಿ ಫೈನಲ್ ಆಡಿದೆ. ಈ ವೇಳೆ 7 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಇನ್ನು 2018 ರಲ್ಲಿ ಬಾಂಗ್ಲಾದೇಶ್ ವಿರುದ್ಧ ಮುಗ್ಗರಿಸುವ ಮೂಲಕ ಒಂದು ಬಾರಿ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದೆ. ಇದೀಗ 9ನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಎಂಟ್ರಿ ಕೊಟ್ಟಿರುವ ಟೀಮ್ ಇಂಡಿಯಾ ಈ ಸಲ ಕೂಡ ಟ್ರೋಫಿ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿದೆ. ಮಹಿಳಾ ಏಷ್ಯಾಕಪ್ ಫೈನಲ್ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಯಿಂದ ಶುರುವಾಗಲಿದೆ. ಇನ್ನು ಟಾಸ್ ಪ್ರಕ್ರಿಯೆ 2.30 ಕ್ಕೆ ನಡೆಯಲಿದೆ.