ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಜೈಲು ಸೇರಿರುವ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ ಸೋಮವಾರ ಭೇಟಿಯಾಗಿ ಕೊಲ್ಲೂರು ಮೂಕಾಂಬಿಕೆಯ ಪ್ರಸಾದ ನೀಡಿದ್ದಾರೆ. ಮೈದುನ ದಿನಕರ್ ತೂಗುದೀಪ, ಪುತ್ರ ವಿನೀಶ್ ಹಾಗೂ ಕೆಲ ಸ್ನೇಹಿತರೊಂದಿಗೆ ಕೇಂದ್ರ ಕಾರಾಗೃಹಕ್ಕೆ ಬಂದಿದ್ದ ವಿಜಯಲಕ್ಷ್ಮಿ, ಪತಿ ದರ್ಶನ್ ಹಣೆಗೆ ಕುಂಕುಮ ಇರಿಸಿ ಲಡ್ಡು ಪ್ರಸಾದ ಹಾಗೂ ತೀರ್ಥ ನೀಡಿದರು. ಬಳಿಕ ತಾವು ಕೊಲ್ಲೂರಿನ ದೇವಸ್ಥಾನಕ್ಕೆ ತೆರಳಿ ಚಂಡಿಕಾ ಹೋಮ ನೆರವೇರಿಸಿದ ಬಗ್ಗೆ ಮಾಹಿತಿ ನೀಡಿದರು. ಪ್ರಕರಣದ ಬಗೆಗಿನ ಮುಂದಿನ ಕಾನೂನು ಹೋರಾಟದ ಬಗ್ಗೆ ಕೆಲ ಕಾಲ ಚರ್ಚಿಸಿದರು ಎನ್ನಲಾಗಿದೆ.