ವಿಪಕ್ಷನಾಯಕ ರಾಹುಲ್ ಗಾಂಧಿಯವರ ಜಾತಿಯ ಬಗ್ಗೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಮಂಗಳವಾರ ಲೋಕಸಭೆಯಲ್ಲಿ ಆಡಿದ್ದ ಆಕ್ಷೇಪಾರ್ಹ ಮಾತಿನ ಹಿನ್ನೆಲೆಯಲ್ಲಿ ಬುಧವಾರ ಸದನದಲ್ಲಿ ತೀವ್ರ ಕೋಲಾಹಲ ಉಂಟಾಗಿದೆ. ಅಪರೂಪದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ವಿರುದ್ಧವೇ ಹಕ್ಕುಚ್ಯುತಿ ನಿಲುವಳಿ ಮಂಡಿಸಲು ನೋಟಿಸ್ ನೀಡಿದ್ದಾರೆ. ಇದೇ ವೇಳೆ, ವಿಪಕ್ಷಗಳ ತೀವ್ರ ಗದ್ದಲದ ಹಿನ್ನೆಲೆಯಲ್ಲಿ ಸದನ ಅರ್ಧ ದಿನ ಮುಂದೂಡಿಕೆ ಕೂಡ ಕಂಡಿದೆ. ಈ ನಡುವೆ, ಅನುರಾಗ್ ಠಾಕೂರ್ ಆಡಿದ ಮಾತಿನಲ್ಲಿ ತಪ್ಪೇನಿದೆ? ರಾಹುಲ್ ಗಾಂಧಿಯೇ ಎಲ್ಲರ ಜಾತಿ ಕೇಳುತ್ತಿರುತ್ತಾರೆ ಎಂದು ಬಿಜೆಪಿ ತಿರುಗೇಟು ನೀಡಿದೆ.
ಅನುರಾಗ್ ಠಾಕೂರ್ ಮಂಗಳವಾರ ಲೋಕಸಭೆಯಲ್ಲಿ ಮಾತನಾಡಿ, ʻತಮ್ಮ ಜಾತಿ ಯಾವುದೆಂದೇ ಗೊತ್ತಿಲ್ಲದ ರಾಹುಲ್ ಗಾಂಧಿ, ಜಾತಿ ಗಣತಿ ಬಗ್ಗೆ ಕೇಳುತ್ತಿದ್ದಾರೆ’ ಎಂದಿದ್ದರು. ಅವರ ಮಾತುಗಳಲ್ಲಿ ಕೆಲ ಆಕ್ಷೇಪಾರ್ಹ ಪದಗಳನ್ನು ಸ್ಪೀಕರ್ ಕಡತದಿಂದ ತೆಗೆದಿದ್ದರು. ಆದರೆ, ಆ ಪದಗಳು ಕೂಡ ಇರುವ ಸಂಸತ್ ಟಿವಿ ಚಾನೆಲ್ನ ಮೂಲ ವಿಡಿಯೋವನ್ನು ಪ್ರಧಾನಿ ಮೋದಿ ʻಎಕ್ʼ ನಲ್ಲಿ ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಸದನದ 222ನೇ ನಡಾವಳಿಯ ಪ್ರಕಾರ ಹಕ್ಕುಚ್ಯುತಿ ನಿಲುವಳಿ ಮಂಡಿಸಲು ಕಾಂಗ್ರೆಸ್ನ ದಲಿತ ಸಂಸದ ಚರಣ್ಜಿತ್ ಚೆನ್ನಿ ಬುಧವಾರ ಸ್ಪೀಕರ್ಗೆ ನೋಟಿಸ್ ನೀಡಿದರು. ಕಡತದಿಂದ ಯಾವುದೇ ಪದವನ್ನು ತೆಗೆದುಹಾಕಿದರೆ ಆ ಪದವನ್ನು ಸಂಸದರು ಸದನದಲ್ಲಿ ಆಡಿಲ್ಲವೆಂದೇ ಅರ್ಥ. ಇದನ್ನು ಸುಪ್ರೀಂಕೋರ್ಟ್ ಕೂಡ ಹೇಳಿದೆ. ಆದರೂ ಆ ಪದಗಳನ್ನು ಪ್ರಧಾನಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಹಕ್ಕುಚ್ಯುತಿ ಉಂಟುಮಾಡಿದ್ದಾರೆ ಎಂದು ನೋಟಿಸ್ನಲ್ಲಿ ಹೇಳಲಾಗಿದೆ.