ರಾಜ್ಯದಲ್ಲಿ ಡೆಂಘೀ ಆತಂಕ ಮುಂದುವರೆದಿದ್ದು ಶುಕ್ರವಾರದ ವೇಳೆಗೆ ಕಳೆದ 24 ಗಂಟೆಗಳಲ್ಲಿ 361 ಮಂದಿಗೆ ಡೆಂಘೀ ದೃಢಪಟ್ಟಿದೆ. ಹೀಗಾಗಿ ಒಟ್ಟು ಪ್ರಕರಣಗಳ ಸಂಖ್ಯೆ 19 ಸಾವಿರ ಗಡಿ ತಲುಪಿದೆ. ಶುಕ್ರವಾರ 3,003 ಮಂದಿಗೆ ಪರೀಕ್ಷೆ ನಡೆಸಲಾಗಿದೆ. 1 ವರ್ಷದೊಳಗಿನ 9 ಮಂದಿ ನವಜಾತ ಶಿಶುಗಳಿಗೆ, 18 ವರ್ಷದೊಳಗಿನ 132 ಮಂದಿ ಮಕ್ಕಳಿಗೆ ಸೇರಿ 361 ಮಂದಿಗೆ ಡೆಂಘೀ ದೃಢಪಟ್ಟಿದ್ದು, ಒಟ್ಟು 2,484 ಮಂದಿ ಸಕ್ರಿಯ ಡೆಂಘೀ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 2,003 ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, 481 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ 10 ಮಂದಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.