ನಿನ್ನೆ ರಾಮನಗರದಲ್ಲಿ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮದಲ್ಲಿ ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಕೌಂಟರ್ ಕೊಡುತ್ತಾ ಡಿಸಿಎಂ ಡಿ ಕೆ ಶಿವಕುಮಾರ್ ಜೆಡಿಎಸ್ ನಾಯಕ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತು ಅವರ ಕುಟುಂಬದ ವಿರುದ್ಧ ವಾಗ್ದಾಳಿಯನ್ನೇ ನಡೆಸಿದ್ದರು. ಬೆಂಗಳೂರು, ಮೈಸೂರು ಸುತ್ತಮುತ್ತ ಕುಮಾರಸ್ವಾಮಿಯವರು ನೂರಾರು ಎಕರೆ ಜಮೀನು ಭ್ರಷ್ಟಾಚಾರ ಮೂಲಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಅದಕ್ಕೆ ಇಂದು ಕೌಂಟರ್ ಎಂಬಂತೆ ರಾಮನಗರದ ಬಿಡದಿಯಲ್ಲಿ ಕುಮಾರಸ್ವಾಮಿ ಡಿಕೆ ಶಿವಕುಮಾರ್ ವಿರುದ್ಧ ಟೀಕೆಗಳ ಸುರಿಮಳೆಯನ್ನು ಹರಿಸಿದ್ದಾರೆ.
ಇಂದು ಬಿಜೆಪಿ-ಜೆಡಿಎಸ್ ನ 2ನೇ ದಿನದ ಪಾದಯಾತ್ರೆ ವೇಳೆ ಮಾತನಾಡಿದ ಕುಮಾರಸ್ವಾಮಿ, ನಾನು ಮುಖ್ಯಮಂತ್ರಿಯಾಗಿದ್ದಾಗ ದುಡ್ಡು ಹೊಡೆಯುವ ಕೆಲಸ ಮಾಡಿಲ್ಲ. ಬಿಜೆಪಿ-ಜೆಡಿಎಸ್ ಹೊಂದಾಣಿಕೆ ನೋಡಿ ಕಾಂಗ್ರೆಸ್ ನಿದ್ದೆ ಹಾಳಾಗಿದೆ. ಕೇತನಗಾನಹಳ್ಳಿಯಲ್ಲಿ ಆಸ್ತಿ ಖರೀದಿ ಮಾಡುವಾಗ ಯಾರಿಗಾದರೂ ದಬ್ಬಾಳಿಕೆ ಮಾಡಿದ್ದೇನೆ ಅಂತ ಯಾರಾದರೂ ಒಬ್ಬರು ಹೇಳಿದರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು. ಏಕವಚನದಲ್ಲಿ ಮಾತನಾಡಬೇಕು ಅಂದರೆ ನಿಮಗಿಂತ ಹೆಚ್ಚಿನ ರೀತಿಯಲ್ಲಿ ನಮಗೆ ಮಾತನಾಡಲು ಬರುತ್ತೆ. ಆದರೆ ಅದು ನಮ್ಮ ಸಂಸ್ಕೃತಿಯಲ್ಲ. ಆದರೆ ನಿಮ್ಮಷ್ಟು ಸಣ್ಣತನಕ್ಕೆ ನಾನು ಇಳಿಯಲ್ಲ. ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ರಾಮನಗರಕ್ಕೆ ಬರುವ 15 ವರ್ಷಗಳ ಮೊದಲೇ ಚಲನಚಿತ್ರ ವಿತರಕನಾಗಿ ಕೇತಗಾನಹಳ್ಳಿಯಲ್ಲಿ 45 ಎಕರೆ ಆಸ್ತಿ ಖರೀದಿಸಿದ್ದೇನೆ. ನಾನು ಮುಖ್ಯಮಂತ್ರಿಯಾಗಿದ್ದಾಗ ದುಡ್ಡು ಹೊಡೆಯುವ ಕೆಲಸ ಮಾಡಿಲ್ಲ ಎಂದರು.
ಯಾವುದೇ ದಾಖಲೆಗಳಿಲ್ಲದೆ, ಸುಳ್ಳು ಜಾಹೀರಾತುಗಳನ್ನು ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮುಡಾ ಸೈಟ್ಗಳ ಹಗರಣ ಸಂಬಂಧ ಬಿಜೆಪಿ-ಜೆಡಿಎಸ್ ಚರ್ಚಿಸಿವೆ. ಸದನದಲ್ಲಿ ದಾಖಲೆಗಳ ಸಮೇತ ಎರುಡು ಪಕ್ಷಗಳ ಶಾಸಕರು ಚರ್ಚಿಸಿದ್ದಾರೆ. ಮುಖ್ಯಮಂತ್ರಿಗಳ ಕುಟುಂಬ 15 ಸೈಟ್ಗಳನ್ನು ಪಡೆದಿದ್ದಕ್ಕೆ ನಮ್ಮ ವಿರೋಧವಿಲ್ಲ. ಕಾನೂನುಬಾಹಿರವಾಗಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಸರ್ಕಾರದ ಭೂಮಿಯನ್ನು ಸುಳ್ಳು ದಾಖಲೆ ನೀಡಿ ಸೈಟ್ ಪಡೆದಿದ್ದೀರಿ. ಪತ್ನಿ ಪಾರ್ವತಿ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ಸೈಟ್ಗಳನ್ನ ಪಡೆದಿದ್ದಾರೆ ಎಂದು ಆರೋಪಿಸಿದರು.
ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದಾಗ ಶಾಂತಿನಗರ ಹೌಸಿಂಗ್ ಸೊಸೈಟಿಗೆ ದಲಿತರಿಗೆ ಕೊಟ್ಟ ಭೂಮಿಯನ್ನು ಯಾವ ರೀತಿ ಡಿಕೆಶಿ ಲಪಟಾಸಿದ್ದರು ಎಂಬ ಮಾಹಿತಿ ಸಿದ್ದರಾಮಯ್ಯ ಅವರಿಗೆ ಇಲ್ಲವೇ, ಎಚ್ಡಿಕೆ ಆಸ್ತಿ ಬಗ್ಗೆ ಮಾತನಾಡುವ ನೈತಿಕತೆ ಡಿಕೆಶಿಗೆ ಇದ್ಯಾ, ನಾನು ಜಮೀನು ಖರೀದಿ ಮಾಡಿದಾಗ ಯಾರಿಗೂ ದಬ್ಬಾಳಿಕೆ ಮಾಡಿ, ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ಯಾರಾದರೂ ಹೇಳಿದರೆ ರಾಜಕೀಯ ನಿವೃತ್ತಿ ಆಗ್ತೀನಿ ಎಂದು ಸವಾಲು ಹಾಕಿದರು. ರಾಮನಗರ ಶಾಸಕ ಮತ್ತು ನೀವು ಕೋಡಿಹಳ್ಳಿಯಲ್ಲಿ ಅಕ್ರಮವಾಗಿ ಬಂಡೆ ಒಡೆದು ರಫ್ತು ಮಾಡುತ್ತಿದ್ದೀರಿ. ನೊಣವಿನಕೆರೆ ಅಜ್ಜಯ್ಯ ಏನಾದರೂ ನಿಮಗೆ ಕೊನೆಯ ಹಂತಕ್ಕೆ ಬಂದಿದ್ದೀಯಾ ಅಂತ ಹೇಳಿದ್ದಾರಾ? ಕನಕಪುರದಲ್ಲಿ ಎಷ್ಟು ಕುಟುಂಬ ಹಾಳು ಮಾಡಿದ್ದೀರಿ ಡಿಕೆ ಶಿವಕುಮಾರ್ ಅವರೇ?. ಡಿಕೆ ಶಿವಕುಮಾರ್ ಅವರೇ ಅಜ್ಜಯ್ಯನ ಮೇಲೆ ಗೌರವ ಇದ್ದರೆ, ಪ್ರಮಾಣ ಮಾಡಿ, ನಾನೂ ಮಾಡುತ್ತೇನೆ ಯಾರು ಪ್ರಾಮಾಣಿಕರು ಅಂತ ಗೊತ್ತಾಗುತ್ತೆ. ಇಂದಿನಿಂದ ಡಿಕೆ ಶಿವಕುಮಾರ್ ಅವರಿಗೆ ಅಜ್ಜಯ್ಯನ ಶಾಪ ಪ್ರಾರಂಭವಾಗಿದೆ. ಇನ್ಮುಂದೆ ಅಜ್ಜಯ್ಯ ಕೂಡ ಅವರಿಗೆ ರಕ್ಷಣೆ ಕೊಡಲ್ಲ ಎಂದು ಹೇಳಿದರು.
ಬಿಡದಿಯಲ್ಲಿ ಐಕಾನ್ ನರ್ಸಿಂಗ್ ಸ್ಕೂಲ್ ಭೂಮಿಯನ್ನು ಸಾಲ ಪಡೆದಿದ್ದವರನ್ನು ಹೆದರಿಸಿ ಬರೆಸಿಕೊಂಡಿದ್ದೀರಿ. ಉಪಮುಖ್ಯಮಂತ್ರಿಯಾಗಿ ಸದಾಶಿವನಗರದಲ್ಲಿ ಮೂವರು ವಿಧವೆಯರಿಗೆ ಬೆದರಿಸಿ ನಿಮ್ಮ ಮಗಳ ಹೆಸರಿಗೆ ಆಸ್ತಿ ಬರೆಸಿಕೊಂಡಿದ್ದೀರಿ ಇವುಗಳನ್ನು ತನಿಖೆ ಮಾಡಲು ಒಂದು ಸಿಬಿಐ, ಇಡಿ ಸಾಕಾಗುವುದಿಲ್ಲ. ನಾನು ಬಿಚ್ಚೋಕೆ ಹೋದರೆ ಪುಟಗಟ್ಟಲೆ ಇರಲಿದೆ. ತನಿಖೆಗೆ ಹತ್ತು ಸಿಬಿಐ ತಂಡ ಬೇಕಾದೀತು ಎಂದು ಎಚ್ಚರಿಕೆ ನೀಡಿದರು.