ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನಸ್ ಬಾಂಗ್ಲಾದೇಶದ ಹಂಗಾಮಿ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಲಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಬಾಂಗ್ಲಾದೇಶದಲ್ಲಿ ಇದೀಗ ಮೀಸಲು ವಿವಾದ ಭುಗಿಲೆದ್ದಿದ್ದು, ಹಿಂಸಾಚಾರದ ಹಿನ್ನೆಲೆಯಲ್ಲಿ 5 ಬಾರಿಯ ಪ್ರಧಾನಿ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದಾರೆ.
ಈ ಮೊದಲು ಹಸೀನಾ ಯಾರನ್ನು ರಕ್ತದಾಹಿ ಎಂದು ಕರೆದಿದ್ದರೋ ಅದೇ ಯೂನಸ್ಗೆ ಬಾಂಗ್ಲಾ ಸಾರಥ್ಯ ನೀಡಬೇಕೆಂಬ ಕೂಗು ಕೇಳಿಬಂದಿದೆ. ರಾಷ್ಟ್ರಪತಿ ಮೊಹಮ್ಮದ್ ಶಹಾಬುದ್ದೀನ್ ಮಂಗಳವಾರ ಬಾಂಗ್ಲಾ ಸಂಸತ್ತನ್ನು ವಿಸರ್ಜಿಸಿದ್ದಾರೆ. ಬಳಿಕ ರಕ್ಷಣ ಪಡೆಯ ಮೂರು ವಿಭಾಗಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಚಳವಳಿಯ 13 ಸದಸ್ಯರೊಂದಿಗೆ ಮಧ್ಯಂತರ ಸರ್ಕಾರ ರಚನೆ ಕುರಿತು ಚರ್ಚೆ ನಡೆಸಿದ್ದಾರೆ. ಮೊಹಮ್ಮದ್ ಯೂನುಸ್ ಬಾಂಗ್ಲಾದೇಶದಲ್ಲಿ ಗ್ರಾಮೀಣ ಬ್ಯಾಂಕ್ ಸ್ಥಾಪಿಸಿ ಸಣ್ಣ ಉದ್ಯಮಗಳಿಗೆ ಬೆಂಬಲ ನೀಡಿ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದವರು.
ಹಸೀನಾ ಅವರು ತಮ್ಮ ತಂಗಿ ಶೇಖ್ ರೆಹಾನಾ ಅವರೊಂದಿಗೆ ಸೇನಾ ವಿಮಾನದ ಮೂಲಕ ದೇಶ ತೊರೆದ ಸುದ್ದಿ ಬಿತ್ತರವಾದ ಕೂಡಲೇ ಸಾವಿರಾರು ಸಂಖ್ಯೆಯ ಪ್ರತಿಭಟನಕಾರರು ಪ್ರಧಾನಿ ಅವರ ಅಧಿಕೃತ ನಿವಾಸಕ್ಕೆ ‘ಗಾನಾಭವನ್’ಗೆ ನುಗ್ಗಿ ಲೂಟಿ ಮಾಡಿದರು. ಮನೆಯ ಆವರಣದಲ್ಲಿದ್ದ ಶೇಖ್ ಮುಜಿಬುರ್ ರೆಹಮಾನ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದರು.