ಸ್ವಾತಂತ್ರೋತ್ಸವದ ಅಂಗವಾಗಿ ಲಾಲ್ಬಾಗ್ನ ಸಸ್ಯೋದ್ಯಾನದಲ್ಲಿ 216ನೇ ಫಲಪುಷ್ಪ ಪ್ರದರ್ಶನ ಗುರುವಾರ, ಆಗಸ್ಟ್ 8 ದಿಂದ 19ರವರೆಗೆ ನಡೆಯಲಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ವಿಷಯಾಧಾರಿತವಾಗಿ ಹಮ್ಮಿಕೊಂಡಿರುವ ಪ್ರದರ್ಶನವನ್ನು ಗುರುವಾರ ಬೆಳಿಗ್ಗೆ 10.30ಕ್ಕೆ ಸಿಎಂ ಸಿದ್ದರಾಮಯ್ಯ ಗಾಜಿನ ಮನೆಯಲ್ಲಿ ಅಂಬೇಡ್ಕರ್ ಪುತ್ಥಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಲಿದ್ದಾರೆ.
ಸಮಾರಂಭದ ಮುಖ್ಯ ಅತಿಥಿಯಾಗಿ ಅಂಬೇಡ್ಕರ್ ಅವರ ಮೊಮ್ಮಗ ಡಾ. ಭೀಮರಾವ್ ಯಶವಂತ ಅಂಬೇಡ್ಕರ್ ಭಾಗವಹಿಸಲಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ರಾಮಲಿಂಗಾರೆಡ್ಡಿ, ಡಾ. ಎಚ್.ಸಿ. ಮಹದೇವಪ್ಪ, ಶಾಸಕ ಉದಯ್ ಬಿ. ಗರುಡಾಚಾರ್, ಸಂಸದ ತೇಜಸ್ವಿ ಸೂರ್ಯ, ಮೇಲ್ಮನೆ ಸದಸ್ಯರಾದ ಟಿ.ಎ. ಶರವಣ, ರಾಮೋಜಿ ಗೌಡ, ಸರ್ಕಾರದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮತ್ತು ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಡಾ. ಶಮಾ ಇಟ್ಬಾಲ್ ಉಪಸ್ಥಿತರಿರಲಿದ್ದಾರೆ.
ವಿಶೇಷ ಆಕರ್ಷಣೆ ಏನು?: ಉದ್ಘಾಟನಾ ಸಮಾರಂಭದ ಆಕರ್ಷಣೆಯಾಗಿ ಏರ್ಫೋರ್ಸ್ ಮತ್ತು ಬಿಎಸ್ಎಫ್ ಬ್ಯಾಂಡ್ಗಳ ವಿಶೇಷ ವಾದನವಿರಲಿದೆ. ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಸಂಸತ್ ಭವನದ ಪುಷ್ಪ ಮಾದರಿ ನಿರ್ಮಿಸಲಾಗುತ್ತದೆ. ಅದರ ಮುಂಭಾಗದಲ್ಲಿ ಅಂಬೇಡ್ಕರ್ ಅವರ 12 ಅಡಿ ಎತ್ತರದ ಬೃಹತ್ ಪ್ರತಿಮೆ ನಿಲ್ಲಿಸಲಾಗುವುದು. ಗಾಜಿನ ಮನೆಯಲ್ಲಿ ಅಂಬೇಡ್ಕರ್ ಜೀವನ ಸಾಧನೆ ಮತ್ತು ಹೋರಾಟಗಳನ್ನು ಪ್ರತಿಬಿಂಬಿಸುವ ಪುಷ್ಪಾಕೃತಿಗಳಿರಲಿದೆ. ರಸ್ತೆ ಬದಿಯ ಕಂಬಗಳಲ್ಲಿ ಅಂಬೇಡ್ಕರ್ ಸೂಕ್ತಿಗಳನ್ನು ಪ್ರದರ್ಶಿಸಲಾಗುವುದು.