ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಒಲಿಂಪಿಕ್ಸ್ ಫೈನಲ್ನಿಂದ ಅನರ್ಹಗೊಳಿಸಿರುವುದು ಭಾರತದ ವಿರುದ್ಧದ ದೊಡ್ಡ ಪಿತೂರಿ ಎಂದು ಭಾರತದ ಖ್ಯಾತ ಬಾಕ್ಸಿಂಗ್ ಪಟು ವಿಜೇಂದರ್ ಸಿಂಗ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿನೇಶ್ ಫೋಗಟ್ ಅವರಂತಹ ಖ್ಯಾತ ಕ್ರೀಡಾಪಟುಗಳು ಪ್ರಮುಖ ಸ್ಪರ್ಧೆಗಳಿಗೆ ಮುನ್ನ ತೂಕವನ್ನು ಕಡಿಮೆ ಮಾಡುವ ತಂತ್ರಗಳನ್ನು ಚೆನ್ನಾಗಿ ತಿಳಿದಿರುತ್ತಾರೆ ಎಂದು ಒಲಿಂಪಿಕ್ಸ್ ಪದಕ ವಿಜೇತ ಭಾರತದ ಮೊದಲ ಮತ್ತು ಏಕೈಕ ಪುರುಷ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಹೇಳಿದ್ದಾರೆ.
ಇದು ದೊಡ್ಡ ಕುತಂತ್ರವಾಗಿರಬಹುದು ಎಂದು ನಾನು ಭಾವಿಸುತ್ತೇನೆ. ಈ ಅನರ್ಹತೆಯು ಭಾರತೀಯ ಕುಸ್ತಿಪಟುಗಳನ್ನು ದುರ್ಬಲಗೊಳಿಸುವ ದೊಡ್ಡ ಪಿತೂರಿಯ ಭಾಗವಾಗಿದೆ. ವಿನೇಶ್ ಅವರ ಪ್ರಯತ್ನ ಶ್ಲಾಘನೀಯ. ಬಹುಶಃ ಕೆಲವರಿಗೆ ಈ ಸಂತೋಷವನ್ನು ಅರಗಿಸಿಕೊಳ್ಳಲಾಗಲಿಲ್ಲ ಎಂದನಿಸುತ್ತದೆ.
ಒಂದು ರಾತ್ರಿಯಲ್ಲಿ ಐದರಿಂದ ಆರು ಕೆ.ಜಿತೂಕ ಇಳಿಸಿಕೊಳ್ಳಬಹುದು. ಹೀಗಿರುವಾಗ 100 ಗ್ರಾಂನ ಸಮಸ್ಯೆ ಏನು? ವಿನೇಶ್ ಗೆದ್ದರೆ ಯಾರಿಗಾದ್ರೂ ಸಮಸ್ಯೆ ಆಗುತ್ತದೆ ಅನಿಸುತ್ತದೆ. ಹಾಗಾಗಿ, ಆಕೆಯನ್ನು ಅನರ್ಹಗೊಳಿಸಿರಬಹುದು. 100 ಗ್ರಾಂ ತೂಕ ಇಳಿಸಿಕೊಳ್ಳಲು ಆಕೆಗೆ ಅವಕಾಶ ನೀಡಬೇಕಿತ್ತು” ಎಂದು ವಿಜೇಂದರ್ ಸಿಂಗ್ ಹೇಳಿದ್ದಾರೆ.
ನನ್ನ ಪ್ರಕಾರ ಭಾರತ ಕ್ರೀಡಾ ರಾಷ್ಟ್ರವಾಗಿ ಬೆಳೆಯುವುದನ್ನು ನೋಡಿ ಸಹಿಸಿಕೊಳ್ಳಲು ಆಗದವರು ದೊಡ್ಡ ಪಿತೂರಿ ಮಾಡಿದ್ದಾರೆ. ಈ ಹುಡುಗಿ ತುಂಬಾ ಕಷ್ಟ ಅನುಭವಿಸಿದ್ದಾಳೆ ಎಂದಿದ್ದಾರೆ.