2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಆಘಾತ ತಟ್ಟಿದೆ. ಒಲಿಂಪಿಕ್ಸ್ನಿಂದ ಅನರ್ಹಗೊಂಡು ವಿನೇಸ್ ಪೋಗಟ್ ಕಸ್ತಿಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಮತ್ತೊಬ್ಬರು ಭಾರತೀಯ ಕುಸ್ತಿಪಟುವನ್ನು ಪ್ಯಾರಿಸ್ನಿಂದ ಗಡಿಪಾರು ಮಾಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಭಾರತೀಯ ಕುಸ್ತಿಪಟು ಅಂತಿಮ್ ಪಂಘಲ್ ಅವರು ತಮ್ಮ ಮಾನ್ಯತಾ ಗುರುತಿನ ಚೀಟಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಹಾಗಾಗಿ ಅಶಿಸ್ತಿನ ವರ್ತನೆ ಮೇರೆಗೆ ಅವರನ್ನು ಗಡಿಪಾರು ಮಾಡಲು ಪ್ಯಾರಿಸ್ ಒಲಿಂಪಿಕ್ಸ್ ಸಮಿತಿ ನಿರ್ದರಿಸಿದೆ. ಇದ್ದಕ್ಕೂ ಮುನ್ನ ಪಂಘಲ್ ಟರ್ಕಿಯ ಯೆಟ್ಗಿಲ್ ಝೆನೆಪ್ ವಿರುದ್ಧ 0-10 ಅಂತರದಲ್ಲಿ ಸೋತಿದ್ದರು.
ಅಂತಿಮ್ ಫ್ರೀ ಕ್ವಾರ್ಟರ್ ಫೈನಲ್ನಲ್ಲಿ ಸೋತ ನಂತರ ಗೇಮ್ಸ್ ವಿಲೇಜ್ ತೊರೆದು ತನ್ನ ತರಬೇತುದಾರ ಮತ್ತು ಸಹೋದರಿ ತಂಗಿದ್ದ ಹೋಟೆಲ್ಗೆ ತೆರಳಿದ್ದರು. ಈ ವೇಳೆ ಅವರು ತನ್ನ ಅಧಿಕೃತ ಐಡಿ ಕಾರ್ಡ್ ಅನ್ನು ಸಹೋದರಿ ನಿಶಾ ಅವರಿಗೆ ನೀಡಿ ಗೇಮ್ಸ್ ವಿಲೇಜ್ಗೆ ತೆರಳಿ ಬ್ಯಾಗ್ ತರುವಂತೆ ಸೂಚಿಸಿದ್ದರು. ಅದರಂತೆ ಗೇಮ್ಸ್ ವಿಲೇಜ್ನಿಂದ ಹೊರ ಬರುತ್ತಿದ್ದಾಗ ನಿಶಾ ಭದ್ರತಾ ಸಿಬ್ಬಂದಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದರು. ವಿಚಾರಣೆ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು. ಜೊತೆಗೆ ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ಪಂಘಲ್ ಅವರ ಇಡೀ ಪರಿವಾರವನ್ನೇ ಗಡೀಪಾರು ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.