ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆ ಹಾಗೂ ಬಡ್ತಿ ವಿಚಾರದಲ್ಲಿ ಆಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರು ತರಗತಿ ಬಹಿಷ್ಕರಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಬಹುತೇಕ ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗಿಯಾಗುವುದರಿಂದ ತರಗತಿ ಚಟುವಟಿಕೆಗಳು ಸೋಮವಾರ ಸಂಪೂರ್ಣ ಬಂದ್ ಆಗುವ ಸಾಧ್ಯತೆ ಇದೆ. ರಾಜ್ಯಮಟ್ಟದ ಬೃಹತ್ ಪ್ರತಿಭಟನೆಗೆ ಕರೆ ನೀಡಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಆಗಮಿಸುವಂತೆ ಶಿಕಕರಿಗೆ ಮನವಿ ಮಾಡಿದೆ. ಇದರ ನಡುವೆ ಶಿಕ್ಷಣ ಇಲಾಖೆ, ಸೋಮವಾರ ಸರ್ಕಾರಿ ಶಾಲೆಗಳು ಎಂದಿನಂತೆ’ ಕಾರ್ಯನಿರ್ವಹಿಸುತ್ತವೆ, ಎಂದಿನಂತೆ ಸುಗಮವಾಗಿ ಶಾಲೆಗಳನ್ನು ನಡೆಸಬೇಕೆಂದು ಸೂಚಿಸಿದೆ.
ಪ್ರಮುಖ ಬೇಡಿಕೆಗಳು:
- 2016ರ ಮೊದಲು ನೇಮಕವಾಗಿರುವ ಶಿಕ್ಷಕರಿಗೆ 2017ರ ಹೊಸ ವೃಂದ ಮತ್ತು ನೇಮಕಾತಿಗಳನ್ನು ಅನ್ವಯಿಸದೆ 1ರಿಂದ 8ನೇ ತರಗತಿವರೆಗೆ ಬೋಧನೆಗೆ ಅವಕಾಶ ನೀಡಬೇಕು.
- ಪದವಿ ಮುಗಿಸಿರುವ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ ಪ್ರೌಢಶಾಲಾ ಶಿಕ್ಷಕರಾಗಿ ಬಡ್ತಿಗೆ ಅವಕಾಶ ಕಲ್ಪಿಸಬೇಕು.
- ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಹಿಂದಿನಂತೆ ಮುಖ್ಯ ಶಿಕ್ಷಕ ಹುದ್ದೆಗೆ ಬಡ್ತಿ ನೀಡಬೇಕು.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಬೆಳಗ್ಗೆ 10.30ರಿಂದ ಸಂಜೆ 5 ಗಂಟೆವರೆಗೂ ತಮ್ಮ ಬೇಡಿಕೆಗಳ ಈಡೇರಿಕೆಗೆ ಹಾಗೂ ಅನ್ಯಾಯ ಸರಿಪಡಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಸರ್ಕಾರ ಸ್ಪಂದಿಸದೆ ಇದ್ದರೆ ಪ್ರಾಥಮಿಕ ಶಾಲಾ ಶಿಕಕರು ಇನ್ನು ಮುಂದೆ ಸರ್ಕಾರದ ನಿಯಮದಂತೆಯೇ 1ರಿಂದ 5ನೇ ತರಗತಿವರೆಗೆ ಮಾತ್ರ ಪಾಠ ಮಾಡಲು ನಿರ್ಣಯ ಕೈಗೊಳ್ಳಲು ನಿರ್ಧರಿಸಿದ್ದಾರೆ. ಜತೆಗೆ ಶಿಕ್ಷಕರ ದಿನಾಚರಣೆಯಂದು ಕಪ್ಪು ಪಟ್ಟಿ ಧರಿಸಿ ತರಗತಿ ಚಟುವಟಿಕೆಯಲ್ಲಿ ಭಾಗವಹಿಸುವುದು ಸೇರಿದಂತೆ ಹಂತ ಹಂತವಾಗಿ ಪ್ರತಿಭಟನೆ ತೀವ್ರಗೊಳಿಸಿ ಅಹೋರಾತ್ರಿ ಧರಣಿಗೆ ನಿರ್ಧಾರ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ನಾಗೇಶ್ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.