ರಾಜ್ಯದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 68450 ಎಚ್ಐವಿ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಎಚ್ಐವಿ ಸೋಂಕಿನ ಕುರಿತು ಯುವಜನತೆ ಸೇರಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿರುವ ಎರಡು ತಿಂಗಳ ʻಅಂತಾರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಎಚ್ಐವಿ ತಡೆ ಪ್ರಚಾರಾಂದೋಲನʼ ಸೋಮವಾರ ಚಾಲನೆ ನೀಡಿದ ಅವರು, ದೇಶದಲ್ಲಿ ಎಚ್ಐವಿ ಸೋಂಕು ಹರಡುವಿಕೆ ಕಡಿಮೆಯಾಗಿದ್ದರೂ, 2023-24ನೇ ಸಾಲಿನಲ್ಲಿ ರಾಜ್ಯದಲ್ಲಿ 68,450 ಕೇಸ್ ವರದಿಯಾಗಿವೆ. ದೇಶದಲ್ಲಿರುವ 24.44 ಲಕ್ಷ ಸೋಂಕಿತರ ಪೈಕಿ ಕರ್ನಾಟಕ ದಲ್ಲೇ 2.28 ಲಕ್ಷ ಸೋಂಕಿತರಿದ್ದಾರೆ. ಅದರಲ್ಲಿ 1.91 ಲಕ್ಷ ಜನ ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಪಾಸಿಟಿವ್ ಪ್ರಮಾಣ ಶೇ.0.41: 2023ರಲ್ಲಿ ಏಪ್ರಿಲ್ನಿಂದ ಅಕ್ಟೋಬರ್ ನಡುವೆ ರಾಜ್ಯದ 475 ಆಪ್ತ ಸಮಾಲೋಚನಾ ಕೇಂದ್ರಗಳಲ್ಲಿ 18,65,141 ಎಚ್ಐವಿ ಪರೀಕ್ಷೆ ನಡೆಸಲಾಗಿದ್ದು, 7,696 ಸೋಂಕು ದೃಢಪಟ್ಟಿದೆ. ಪಾಸಿಟಿವ್ ಪ್ರಮಾಣ 0.41 ಇದೆ. ಇದೇ ಅವಧಿಯಲ್ಲಿ 8,37,709 ಗರ್ಭಿಣಿಯರಿಗೆ ತಪಾಸಣೆ ನಡೆಸಿದಾಗ 327 ಜನರಲ್ಲಿ ಸೋಂಕು ದೃಢವಾಗಿದೆ. 2025ರ ವೇಳೆಗೆ ಗರ್ಭಿಣಿಯರಿಂದ ಅವರ ಮಗುವಿಗೆ ಸೋಂಕು ತಗಲುವ ಪ್ರಮಾಣವನ್ನು ಶೂನ್ಯಗೊಳಿಸಲು ಆಸ್ಪತ್ರೆಯಲ್ಲಿ ಕಡ್ಡಾಯ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.