ಅಭಿಮಾನಿಗಳು ನೀರಜ್ ಚೋಪ್ರಾ ಹಾಗೂ ಮನು ಭಾಕರ್ ಮಧ್ಯೆ ಪ್ರೇಮ ಸಂಬಂಧದ ಲಿಂಕ್ ಮಾಡಿರುವುದಕ್ಕೆ ಮನು ಭಾಕರ್ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಮುಕ್ತಾಯವಾಗಿದೆ. ಐದು ಕಂಚು ಹಾಗೂ 1 ಬೆಳ್ಳಿ ಪದಕದೊಂದಿಗೆ ಭಾರತದ ಹೋರಾಟ ಮುಗಿದಿದೆ. ಚಿನ್ನದ ನಿರೀಕ್ಷೆ ಇಡಲಾಗಿದ್ದ ಅಥ್ಲೀಟ್ ನೀರಜ್ ಚೋಪ್ರಾ ದೇಶದ ಏಕೈಕ ಬೆಳ್ಳಿ ಪದಕ ಸಂಪಾದನೆ ಮಾಡಿದರೆ, ಮನು ಭಾಕರ್ ಅವಳಿ ಕಂಚಿನ ಪದಕವನ್ನು ಶೂಟಿಂಗ್ನಲ್ಲಿ ಜಯಿಸಿದರು. ಒಂದೇ ಒಲಿಂಪಿಕ್ಸ್ನಲ್ಲಿ ಅವಳಿ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎನ್ನುವ ಶ್ರೇಯಕ್ಕೆ ಮನು ಭಾಕರ್ ಪಾತ್ರರಾಗಿದ್ದಾರೆ. ಶೂಟಿಂಗ್ ವಿಭಾಗದ ಸ್ಪರ್ಧೆಗಳು ಮುಗಿದ ಬಳಿಕ ಭಾರತಕ್ಕೆ ವಾಪಸಾಗಿದ್ದ ಮನು ಭಾಕರ್, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಹಲವರನ್ನು ಭೇಟಿಯಾಗಿದ್ದರು. ಇದರ ನಡುವೆ ಅವರನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಪ್ಯಾರಿಸ್ ಒಲಿಂಪಿಕ್ಸ್ನ ಸಮಾರೋಪ ಸಮಾರಂಭದ ಧ್ವಜಧಾರಿಯಾಗಿ ಘೋಷಣೆ ಮಾಡಿತ್ತು. ಇದಕ್ಕಾಗಿ ಮತ್ತೊಮ್ಮೆ ಪ್ಯಾರಿಸ್ಗೆ ಹೋಗಿದ್ದ ಮನು ಭಾಕರ್ ಈ ಬಾರಿ ತಮ್ಮ ತಾಯಿ ಸುಮೇಧಾ ಭಾಕರ್ ಅವರನ್ನು ಕೂಡ ಕರೆದುಕೊಂಡು ಹೋಗಿದ್ದರು. ಪ್ಯಾರಿಸ್ನಲ್ಲಿ ತಮ್ಮ ತಾಯಿಯೊಂದಿಗೆ ಹಲವು ಪ್ರದೇಶಗಳಿಗೆ ಭೇಟಿಯಾದ ಫೋಟೋಗಳನ್ನು ಕೂಡ ಮನು ಹಂಚಿಕೊಂಡಿದ್ದರು.
ಪ್ಯಾರಿಸ್ ಒಲಿಂಪಿಕ್ ನಂತರ ಇವರಿಬ್ಬರು ಮಾತುಕತೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು, ನೆಟ್ಟಿಗರು ಇವರಿಬ್ಬರು ಮದುವೆಯಾದರೆ ಚೆನ್ನಾಗಿರುತ್ತದೆ ಜೋಡಿ ಚೆನ್ನಾಗಿದೆ ಎಂದೆಲ್ಲಾ ಮಾತನಾಡಿದ್ದರು. ಇದಾದ ನಂತರ ಮನು ಭಾಖರ್ ತಾಯಿ ಸುಮೇಧಾ ಭಾಕರ್ ನೀರಜ್ ಚೋಪ್ರಾ ಅವರ ಕೈ ಹಿಡಿದು ಮಾತನಾಡುತ್ತಿರುವ ವೀಡಿಯೋ ವೈರಲ್ ಆದಾಗ ಇದೇ ಸೋಶಿಯಲ್ ಮೀಡಿಯಾ ಬಳಕೆದಾರರು ಹೋ ಸಂಬಂದ ಖಚಿತ ಆಯ್ತು, ಮದುವೆ ಪಕ್ಕಾ ಎಂದೆಲ್ಲಾ ವೀಡಿಯೋಗೆ ಕಾಮೆಂಟ್ ಮಾಡಲು ಶುರು ಮಾಡಿದ್ದರು. ಹೀಗಾಗಿ ಭಾರತದ ಸಾಮಾಜಿಕ ಜಾಲತಾಣದಲ್ಲಿ ಈ ಕ್ರೀಡಾತಾರೆಯರ ಹೆಸರು ಸಖತ್ ಟ್ರೆಂಡಿಂಗ್ನಲ್ಲಿದೆ.
ಹೀಗಿರುವಾಗ ಮನು ಭಾಕರ್ ತಂದೆ ರಾಮ್ ಕಿಶನ್ ಭಾಕರ್ ಅವರು ಈ ಗಾಸಿಪ್ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಪತ್ನಿ ಸುಮೇಧಾ ಭಾಕರ್, ನೀರಜ್ ಚೋಪ್ರಾ ಕೈ ಹಿಡಿದು ಮಾತನಾಡುತ್ತಿರುವ ವೀಡಿಯೋ ಬಗ್ಗೆ ಜನ ಹೀಗೆ ಪ್ರತಿಕ್ರಿಯಿಸುತ್ತಿದ್ದಾರೆ ಈ ಬಗ್ಗೆ ನೀವು ಏನು ಹೇಳುವಿರಿ ಎಂದು ಅವರನ್ನು ಕೆಲ ಮಾಧ್ಯಮಗಳು ಪ್ರಶ್ನಿಸಿದ್ದು, ಈ ವೇಳೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಪತ್ನಿ ನೀರಜ್ ಚೋಪ್ರಾ ಜೊತೆ ಖಂಡಿತವಾಗಿಯೂ ಕ್ರೀಡೆಯ ಬಗ್ಗೆಯೇ ಮಾತನಾಡಿರುತ್ತಾಳೆ. ಮನು ಇನ್ನು ಸಣ್ಣವಳು ನಾವು ಆಕೆಯ ಮದುವೆಯ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎಂದು ಮನು ಭಾಕರ್ ತಂದೆ ರಾಮ್ ಕಿಶನ್ ಭಾಕರ್ ಹೇಳಿದ್ದಾರೆ.