ಆಫ್ರೋಡ್ ಎಸ್ಯುವಿ ವಿಭಾಗದಲ್ಲಿ ಮಹೀಂದ್ರಾ ಥಾರ್ ತನ್ನದೇ ಆದ ಛಾಪು ಮೂಡಿಸಿದೆ. ಇದೀಗ ಈ ಎಸ್ಯುವಿ ಐದು ಬಾಗಿಲನ ರೂಪದಲ್ಲಿ ಬರಲು ಸಜ್ಜಾಗಿದೆ. ಬಹುನಿರೀಕ್ಷಿತ ಮಹೀಂದ್ರಾ ಥಾರ್ನ ಮತ್ತೊಂದು ಟೀಸರ್ ಅನ್ನು ಮಹೀಂದ್ರಾ ಆಂಡ್ ಮಹೀಂದ್ರಾ ಕಂಪನಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
ಈಗಾಗಲೇ ಮೂರು ಡೋರ್ನ ಥಾರ್ ತನ್ನ ವಿಭಾಗದಲ್ಲಿ ಪಾರಮ್ಯ ಮೆರೆಯುತ್ತಿದೆ. ಇದೀಗ ಐದು ಡೋರ್ನ ಥಾರ್ 2024ರ ಆಗಸ್ಟ್ 15 ರಂದು ಎಂಟ್ರಿ ಕೊಡಲು ಸಜ್ಜಾಗಿದೆ. ಈ ಎಸ್ಯುವಿಗೆ ʻಥಾರ್ Roxxʼ ಎಂದು ಹೆಸರಿಡಲಾಗಿದೆ. ಈ ಎಸ್ಯುವಿಯ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಮಹೀಂದ್ರಾ ಆಂಡ್ ಮಹೀಂದ್ರಾ ಒಂದೊಂದೇ ಟೀಸರ್ ಅನ್ನು ಹಂಚಿಕೊಳ್ಳುತ್ತಿದೆ. ಮಹೀಂದ್ರಾ ಈ ಎಸ್ಯುವಿಯ ಮತ್ತೊಂದು ಟೀಸರ್ ಹಂಚಿಕೊಂಡಿದ್ದು, ಇದರಲ್ಲಿ ಹೊಸ ಥಾರ್ನ ಮುಂಭಾಗದ ಲುಕ್ ಅನ್ನು ಬಹಿರಂಗಪಡಿಸಲಾಗಿದೆ.
ಟೀಸರ್ ಗಮನಿಸಿದಾಗ ಥಾರ್ Roxx ಮೂರು ಬಾಗಿಲಿನ ಥಾರ್ಗಿಂತ ಭಿನ್ನವಾಗಿರುವ ಗಮನಾರ್ಹ ನವೀಕರಣಗಳನ್ನು ಪಡೆದುಕೊಂಡಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಇದರಲ್ಲಿ ಹೊಸ ಆರು ವರ್ಟಿಕಲ್ ಡಬಲ್ ಸ್ಲ್ಯಾಟ್ ಗ್ರಿಲ್ನ ಪರಿಚಯವು ಪ್ರಮುಖವಾದ ಅಂಶಗಳಲ್ಲಿ ಒಂದಾಗಿದೆ. ಇದು ಹೊಸ ಥಾರ್ನ ರಗಡ್ ಲುಕ್ ಅನ್ನು ಇನ್ನಷ್ಟು ಆಕರ್ಷಕವಾಗಿಸಲು ನೆರವಾಗಿದೆ.