ಶ್ರಾವಣಮಾಸ ಶುರುವಾಗಿದೆ. ಶಿವನ ದೇವಸ್ಥಾನಗಳಲ್ಲಿ ಭಕ್ತಸಾಗರ ಹರಿದು ಬರುತ್ತಿದೆ. ಪೂಜೆ ಪುನಸ್ಕಾರಗಳು ಜೋರಾಗಿ ನಡೆಯುತ್ತಿವೆ. ಆದರೆ ಬಿಹಾರದಲ್ಲಿ ದೊಡ್ಡ ಅನಾಹುತವೇ ನಡೆದು ಹೋಗಿದೆ. ಬಿಹಾರದ ಜಹನಾಬಾದ್ ಜಿಲ್ಲೆಯಲ್ಲಿರುವ ಸಿದ್ಧೇಶ್ವರನಾಥ್ ಮಂದಿರಕ್ಕೆ ರವಿವಾರದಂದು ಭಕ್ತಸಾಗರವೇ ಹರಿದು ಬಂದಿದೆ. ಪ್ರವೇಶ ಹಾಗೂ ನಿರ್ಗಮನದ ಸಮಯದಲ್ಲಿ ಜನರ ನಡುವೆ ಸುಳಿದಾಡಲು ಆಗದದಷ್ಟು ಜನಸಂದಣಿಯಾಗಿದ್ದರಿಂದ ಕಾಲ್ತುಳಿತವಾಗಿ 7 ಮಂದಿ ಭಕ್ತರ ಜೀವ ಕಳೆದುಕೊಂಡ ಘಟನೆ ನಡೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ದೊಡ್ಡ ಸದ್ದು ಮಾಡುತ್ತಿದೆ. ಮಹಾದೇವನ ದರ್ಶನಕ್ಕೆ ಬಂದವರು ನಡರಾತ್ರಿ 11.30ರ ಸುಮಾರಿಗೆ ಭಕ್ತಸಾಗರ ಹೆಚ್ಚಾದ ಕಾರಣದಿಂದಾಗಿ ಕಾಲ್ತುಳಿತ ಸಂಭವಿಸಿದೆ. ಮೃತಪಟ್ಟ 7 ಜನರಲ್ಲಿ ಆರು ಜನರು ಮಹಿಳೆಯರೇ ಎಂದು ತಿಳಿದು ಬಂದಿದೆ. ಮತ್ತೊಂದು ವಿಷಯವಂದ್ರೆ ಮೃತಪಟ್ಟ 7 ಜನರೂ ಕೂಡ ಕನ್ವರ್ ಯಾತ್ರೆಗೆ ಅಂತ ಬಂದಿದ್ದ ಕನ್ವರಿಯಾಗಳು ಎಂದು ದೇವಸ್ಥಾನ ಸ್ಪಷ್ಟಪಡಿಸಿದೆ.
ಬಿಹಾರದ ಸಿಎಂ ನಿತೀಶ್ ಕುಮಾರ್ ಘಟನೆಯ ಕುರಿತು ನೋವು ವ್ಯಕ್ತಪಡಿಸಿದ್ದಾರೆ. ಮೃತ ಕುಟುಂಬಕ್ಕೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಇನ್ನು ಮೃತಪಟ್ಟವರನ್ನು ಪ್ಯಾರೆ ಪಾಸ್ವಾನ್, ನಿಶಾದೇವಿ, ಪೂನಮ್ ದೇವಿ ನಿಶಾ ಕುಮಾರಿ ಹಾಗೂ ಸುಶೀಲಾ ದೇವಿ ಎಂದು ಗುರುತಿಸಲಾಗಿದೆ. ಒಬ್ಬ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ.