ಅಕ್ಟೋಬರ್ನಲ್ಲಿ ನಡೆಯಲಿರುವ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗುತ್ತಿದ್ದು, ದಸರೆಯ ಮೊದಲ ಅತಿಥಿಗಳಾದ ಆನೆಗಳ ಪಡೆಯು ಆಗಸ್ಟ್ 21ರಂದು ಕಾಡಿನಿಂದ ಮೈಸೂರಿಗೆ ಆಗಮಿಸಲಿದೆ. ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಿಂದ ಗಜಪಡೆಯ ಪಯಣ ಸಾಗಲಿದ್ದು, ಅರಣ್ಯ ಇಲಾಖೆ ಪೂರ್ವಭಾವಿ ಸಿದ್ಧತೆಯಲ್ಲಿ ತೊಡಗಿದೆ.
2024ರ ದಸರಾ ಮಹೋತ್ಸವದ ಗಜಪಡೆಯ ಮೊದಲ ತಂಡದಲ್ಲಿ-9 ಮತ್ತು ಎರಡನೇ ತಂಡದಲ್ಲಿ 5 ಆನೆಗಳು ಸೇರಿ ಒಟ್ಟು 14 ಆನೆಗಳು ಅರಮನೆ ನಗರಿಗೆ ಆಗಮಿಸಲಿದ್ದು, 4 ಆನೆಗಳನ್ನು ಮೀಸಲು ಇರಿಸಲಾಗಿದೆ. ಕಳೆದ ಬಾರಿಯಂತೆ ಈ ಸಲವೂ ಅಭಿಮನ್ಯು ಅಂಬಾರಿಯನ್ನು ಹೊರಲಿದ್ದು, ಉಳಿದ ಆನೆಗಳು ಜಂಬೂ ಸವಾರಿಯಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಲಿವೆ. ಏಕಲವ್ಯ ಹೆಸರಿನ 39 ವರ್ಷದ ಆನೆಯೂ ಇದೇ ಮೊದಲ ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದೆ.