ಭಾರತ ಮಾತೆಯ ಮಕ್ಕಳಾದ ನಾವೆಲ್ಲ ಎಂದಿಗೂ ಪರಸ್ಪರರ ಧರ್ಮ, ಭಾಷೆ ಹಾಗೂ ಸಂಸ್ಕೃತಿಯನ್ನು ಗೌರವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಮಕ್ಕಳಿಗೆ ಕರೆ ನೀಡಿದರು.
ಸ್ವಾತಂತ್ರ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರಗಳನ್ನು ವಿತರಿಸಿ ಮಾತನಾಡಿದ ಅವರು, ಸಾಮರಸ್ಯದಿಂದ ಬಾಳಿದರೆ ಮಾತ್ರ ನಾವು ಶತ್ರುಗಳನ್ನು ಸೆದೆಬಡಿಯಲು ಸಾಧ್ಯವಿದೆ ಎನ್ನುವುದು ನಮ್ಮ ಸ್ವಾತಂತ್ರ್ಯ ಹೋರಾಟದ ಸಂದೇಶವಾಗಿದೆ. ಈ ಬಾಲಭವನದಲ್ಲಿ ನೀವೆಲ್ಲಾ ಹೇಗೆ ಎಲ್ಲಾ ಜಾತಿಯ , ಧರ್ಮದ ಮಕ್ಕಳು ಒಟ್ಟಾಗಿ ಆಟ ಆಡ್ತಾ ಸಂಭ್ರಮಿಸುತ್ತಿದ್ದೀರೋ ಹಾಗೆಯೇ ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲಾ ಜಾತಿ-ಧರ್ಮದವರು ಒಟ್ಟಾಗಿದ್ದರಿಂದಲೇ ಬ್ರಿಟೀಷರನ್ನು ನಮ್ಮ ದೇಶದಿಂದ ಓಡಿಸಲು ಸಾಧ್ಯವಾಯಿತು ಎಂದರು.
ನಮ್ಮ ಪೂರ್ವಜರು ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟಿರುವುದು ಇಂದು ನಾವು ಧರ್ಮಕ್ಕಾಗಿ , ಭಾಷೆಗಾಗಿ ಹೋರಾಡಲಿ ಎಂದಲ್ಲ. ಬದಲಾಗಿ ಭಾರತದಲ್ಲಿ ಒಗ್ಗಟ್ಟಿನಿಂದ ಬಾಳಲಿ ಎಂದಾಗಿದೆ. ಹೀಗಾಗಿ ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸಿನ ಭಾರತ ನಿರ್ಮಿಸಲು ಒಂದಾಗಿ ಶ್ರಮಿಸೋಣ. ಸ್ವಾತಂತ್ರ್ಯ ದಿನವಾದ ಇಂದು ನಾವು ದೇಶದಲ್ಲಿ ಏಕತೆ, ಶಾಂತಿ ಹಾಗೂ ಅಭಿವೃದ್ಧಿಯನ್ನು ಸಾಧಿಸಲು ಒಂದಾಗಿ ಪ್ರತಿಜ್ಞೆ ತೊಡೋಣ. ಉಜ್ವಲ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಒಂದಾಗೋಣ ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು.
ಬಾಲ ಭವನ ಅಧ್ಯಕ್ಷರಾದ ಬಿ.ಆರ್.ನಾಯ್ಡು, ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾಧುಕೋಕಿಲಾ ಉಪಸ್ಥಿತರಿದ್ದರು. ನಾನಾ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿಪತ್ರ ಮತ್ತು ಬಹುಮಾನಗಳನ್ನು ವಿತರಿಸಲಾಯಿತು.