ಸದ್ಯ ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯದಲ್ಲಿ ಉಪ ಚುನಾವಣೆ ಮಾಡದೇ ಇರಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಇಂದು ಜಮ್ಮು ಕಾಶ್ಮೀರ ಮತ್ತು ಹರ್ಯಾಣ ರಾಜ್ಯಗಳ ಚುನಾವಣೆ ದಿನಾಂಕವನ್ನು ಮುಖ್ಯ ಆಯುಕ್ತ ರಾಜೀವ್ ಕುಮಾರ್ ಚುನಾವಣಾ ದಿನಾಂಕ ಪ್ರಕಟಿಸಿದರು. ಈ ವೇಳೆ ಯಾವುದೇ ವಿಧಾನಸಭೆ ಮತ್ತು ಲೋಕಸಭೆಗೆ ಉಪಚುನಾವಣೆ ನಡೆಸುವುದಿಲ್ಲ ಎಂದು ಹೇಳಿದರು. 46 ವಿಧಾನ ಸಭೆ ಮತ್ತು ಲೋಕಸಭೆಯ 1 ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ.
ಕೆಲವು ರಾಜ್ಯಗಳಲ್ಲಿ ಹವಾಮಾನ ಸರಿ ಇಲ್ಲ. ಅಸ್ಸಾಂ, ಬಿಹಾರ, ಕೇರಳ ಸೇರಿದಂತೆ ಕೆಲವು ಕಡೆ ಪ್ರವಾಹವಿರುವುದರಿಂದ ಆ ರಾಜ್ಯಗಳಲ್ಲಿ ಚುನಾವಣಾ ಮಾಡಲು ಸಾಧ್ಯವಿಲ್ಲ. ಪರಿಸ್ಥಿತಿ ಸುಧಾರಿಸಿದ ಬಳಿಕ ಚುನಾವಣೆ ಮಾಡುತ್ತೇವೆ ಎಂದು ತಿಳಿಸಿದರು. ಒಂದು ಕ್ಷೇತ್ರ ತೆರವಾದ 6 ತಿಂಗಳ ಒಳಗಡೆ ಚುನಾವಣೆ ನಡೆಸಬೇಕಾಗುತ್ತದೆ. ಹೀಗಾಗಿ ಮುಂದಿನ ಡಿಸೆಂಬರ್ ಒಳಗಡೆ ಉಪಚುನಾವಣೆ ನಡೆಯಲಿದೆ.
ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ. ಚನ್ನಪಟ್ಟಣದಿಂದ ಜೆಡಿಎಸ್ ಶಾಸಕರಾಗಿದ್ದ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭೆಯಿಂದ ಗೆದ್ದು ಕೇಂದ್ರದಲ್ಲಿ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವರಾಗಿದ್ದಾರೆ. ಸಂಡೂರು ಕಾಂಗ್ರೆಸ್ ಶಾಸಕರಾಗಿದ್ದ ಈ ತುಕಾರಾಂ ಅವರು ಬಳ್ಳಾರಿಯಿಂದ ಗೆದ್ದಿದ್ದರಿಂದ ಸಂಡೂರು ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ.