ಕ್ರಿಕೆಟಿಗ, ಭಾರತ ತಂಡದ ಮಾಜಿ ಮುಖ್ಯಕೋಚ್ ರಾಹುಲ್ ದ್ರಾವಿಡ್ ಮಗ ಸಮಿತ್ ದ್ರಾವಿಡ್ ಕೂಡ ಕ್ರಿಕೆಟ್ ಲೋಕದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಸದ್ಯ ನಡೆಯುತ್ತಿರುವ ಮಹಾರಾಜ ಟ್ರೋಫಿ ಟಿ20 2024ರ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಸೇರಿಕೊಂಡಿರುವ ಅವರು, ಪ್ಲೇಯಿಂಗ್ ಇಲೆವೆನ್ನಲ್ಲಿ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಅವರಿಂದ ದೊಡ್ಡ ಮೊತ್ತ ಬರದೇ ಇದ್ದರೂ, ಸಿಕ್ಸರ್ ಸಿಡಿಸುವ ಮೂಲಕ ಗಮನ ಸೆಳೆದಿದ್ದು, ವಿಡಿಯೋ ವೈರಲ್ ಆಗಿದೆ.
ಶುಕ್ರವಾರ ನಡೆದ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡದ ಆಟಗಾರ ಸಮಿತ್ ದ್ರಾವಿಡ್, 7 ಎಸೆತಗಳಲ್ಲಿ 7 ರನ್ ಮಾತ್ರ ಗಳಿಸಿದರು. ಇದರಲ್ಲಿ ಒಂದು ಭರ್ಜರಿ ಸಿಕ್ಸರ್ ಕೂಡ ಸೇರಿತ್ತು. ಅವರು ಸಿಕ್ಸರ್ ಸಿಡಿಸಿದ ಶೈಲಿಗೆ ತಂಡದ ಉಳಿದ ಆಟಗಾರರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು. ಇನಿಂಗ್ಸ್ನ ಏಳನೇ ಓವರ್ನಲ್ಲಿ ಎದುರಾಳಿ ವೇಗಿ ಜ್ಞಾನೇಶ್ವರ್ ನವೀನ್ ಎಸೆತವನ್ನು ಸಿಕ್ಸರ್ ಬಾರಿಸಿದರು. ಬಳಿಕ ಮುಂದಿನ ಎಸೆತದಲ್ಲೇ ಅವರು ಔಟಾದರು.
ರಾಹುಲ್ ದ್ರಾವಿಡ್ ಮಗ ಸಮಿತ್ ದ್ರಾವಿಡ್ ಆಗಸ್ಟ್ 15 ರಂದು ಶಿವಮೊಗ್ಗ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮಹಾರಾಜ ಟ್ರೋಫಿ ಟಿ20 2024 ರಲ್ಲಿ ಪದಾರ್ಪಣೆ ಮಾಡಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಸಮಿತ್ ಆ ಪಂದ್ಯದಲ್ಲಿ ಕೂಡ 7 ರನ್ ಬಾರಿಸಿದ್ದರು.
ಶನಿವಾರ ನಡೆದ ರೋಚಕ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್ 4 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು. ಟಾಸ್ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮಳೆ ಬಂದ ಕಾರಣ ಪಂದ್ಯವನ್ನು 18 ಓವರ್ ಗಳಿಗೆ ನಗದಿಗೊಳಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ವಾರಿಯರ್ಸ್ 18 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತು. ಹರ್ಷಿಲ್ ಧರ್ಮಾನಿ 32 ಎಸೆತಗಳಲ್ಲಿ 50 ರನ್ ಗಳಿಸಿದರೆ, ಮನೋಜ್ ಭಾಂಡಗೆ 33 ಎಸೆತಗಳಲ್ಲಿ 58 ರನ್ ಗಳಿಸಿದರು.
ಈ ಸವಾಲಿನ ಗುರಿಯನ್ನು ಬೆನ್ನತ್ತಿದ ಬೆಂಗಳೂರು ಬ್ಲಾಸ್ಟರ್ಸ್ 17.1 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 183 ರನ್ ಗಳಿಸುವ ಮೂಲಕ 4 ವಿಕೆಟ್ಗಳ ಗೆಲುವು ಸಾಧಿಸಿತು. ಭುವನ್ ರಾಜು 24 ಎಸೆತಗಳಲ್ಲಿ 6 ಸಿಕ್ಸರ್ 1 ಬೌಂಡರಿ ಸಹಿತ 51 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.