ಮೊಬೈಲ್, ಒಟಿಟಿ ವೇದಿಕೆಗಳಿಂದಾಗಿ ಚಲನಚಿತ್ರರಂಗ ಭಾರೀ ಹೊಡೆತ ಅನುಭವಿಸುತ್ತಿರುವ ಹೊತ್ತಿನಲ್ಲೇ ದಕ್ಷಿಣ ಭಾರತದ ಪ್ರಮುಖ ಚಿತ್ರೋದ್ಯಮವಾದ ತಮಿಳು ಚಿತ್ರೋದ್ಯಮ, ತಾತ್ಕಾಲಿಕವಾಗಿ ಚಿತ್ರ ನಿರ್ಮಾಣವನ್ನೇ ಸ್ಥಗಿತಗೊಳಿಸುವ ಐತಿಹಾಸಿಕ ನಿರ್ಧಾರವೊಂದನ್ನು ಕೈಗೊಂಡಿದೆ.
ಖ್ಯಾತನಾಮ ನಟ, ನಟಿಯರು, ತಂತ್ರಜ್ಞರ ದುಬಾರಿ ಸಂಭಾವನೆ, ಹಣ ಪಡೆದು ಶೂಟಿಂಗ್ಗೆ ಆಗಮಿಸದೇ ತೊಂದರೆ ನೀಡುವ ಪ್ರವೃತ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಚಲನಚಿತ್ರ ಶೂಟಿಂಗ್ ನಿಲ್ಲಿಸಲು ತಮಿಳು ಚಿತ್ರ ನಿರ್ಮಾಪಕರ ಮಂಡಳಿ ನಿರ್ಧರಿಸಿದೆ. ಇದಕ್ಕೆ ಥಿಯೇಟರ್ ಮಾಲೀಕರ ಸಂಘ, ಚಿತ್ರ ಹಂಚಿಕೆದಾರರ ಸಂಘ ಕೂಡಾ ಬೆಂಬಲ ವ್ಯಕ್ತಪಡಿಸಿರುವ ಕಾರಣ ಈ ಬಂದ್ ಯಶಸ್ವಿಯಾಗುವುದು ಖಚಿತವಾಗಿದೆ.
ಬಂದ್ ಏಕೆ?: ನಟ, ನಟಿಯರು, ತಂತ್ರಜ್ಞರು ಇತ್ತೀಚಿನ ದಿನಗಳಲ್ಲಿ ತಮ್ಮ ಸಂಭಾವನೆ ಭಾರೀ ಪ್ರಮಾಣದಲ್ಲಿ ಏರಿಸಿದ್ದಾರೆ. ಇನ್ನೊಂದೆಡೆ ಭಾರೀ ಹಣ ಪಡೆದ ಮೇಲೂ ನಟರು, ತಂತ್ರಜ್ಞರು ಶೂಟಿಂಗ್ ಅಥವಾ ಇತರೆ ಚಿತ್ರ ಸಂಬಂಧಿ ಕೆಲಸಕ್ಕೆ ಗೈರಾಗಿ ತೊಂದರೆ ನೀಡುತ್ತಿದ್ದಾರೆ. ಇನ್ನು ಕೆಲವು ಪ್ರಕರಣಗಳಲ್ಲಿ ಯೋಜನೆ ಆರಂಭದ ಬಳಿಕ ಅದಕ್ಕೆ ಕೈಕೊಟ್ಟು ಮತ್ತೊಂದು ಚಿತ್ರ ಒಪ್ಪಿಕೊಳ್ಳುತ್ತಿದ್ದಾರೆ.
ಹೀಗಾಗಿ ನಿರ್ಮಾಪಕರಿಗೆ ಭಾರೀ ನಷ್ಟವಾಗುತ್ತಿದೆ. ಹೀಗಾಗಿ ಈ ಸಮಸ್ಯೆಗೆ ಪರಿಹಾರ ಈ ಕಂಡುಕೊಳ್ಳುವ ನಿಟ್ಟಿನಲ್ಲಿ ಆ.16ರಿಂದಲೇ ಜಾರಿಯಾಗುವಂತೆ ಚಲನಚಿತ್ರರಂಗದ ಚಟುವಟಿಕೆಗಳನ್ನು ಹಂತಹಂತವಾಗಿ ನಿಲ್ಲಿಸಲು ಇತ್ತೀಚೆಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.