ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಇನ್ನಿಲ್ಲ ಎಂಬ ಸುಳ್ಳು ವದಂತಿಯ ಪೋಸ್ಟ್ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಜೀವಂತವಾಗಿ ಇದ್ದಾಗಲೇ ಸಾವಿನ ಕುರಿತು ಸುಳ್ಳು ಸುದ್ದಿ ಮತ್ತು ಟ್ರೋಲ್ ವೈರಲ್ ಆದ ಬೆನ್ನಲ್ಲೇ ಶ್ರೇಯಸ್ ತಲ್ಪಾಡೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಜೀವಂತವಾಗಿದ್ದೇನೆ, ನಮ್ಮ ಭಾವನೆಗಳ ಜೊತೆ ಆಟವಾಡಬೇಡಿ ಎಂದು ನಟ ಮನವಿ ಮಾಡಿದ್ದಾರೆ.\
ನಾನು ಜೀವಂತವಾಗಿದ್ದೇನೆ, ಸಂತೋಷವಾಗಿದ್ದೇನೆ ಮತ್ತು ಆರೋಗ್ಯವಾಗಿದ್ದೇನೆ ಎಂದು ಎಲ್ಲರಿಗೂ ಭರವಸೆ ನೀಡಲು ನಾನು ಬಯಸುತ್ತೇನೆ. ನನ್ನ ಸಾವಿನ ಕುರಿತು ವೈರಲ್ ಆದ ಪೋಸ್ಟ್ ಬಗ್ಗೆ ನನ್ನ ಅರಿವಿಗೆ ಬಂದಿದೆ. ಅದನ್ನು ನೋಡಿದ ಕೂಡಲೇ ಯಾರೋ ತಮಾಷೆಯಾಗಿ ಶುರು ಮಾಡಿದ್ದೆಲ್ಲ ಈಗ ಚಿಂತೆಯನ್ನು ಹುಟ್ಟು ಹಾಕುವಂತಿದೆ. ನನ್ನ ಬಗ್ಗೆ ಅದರಲ್ಲೂ ಮುಖ್ಯವಾಗಿ ನನ್ನ ಕುಟುಂಬದವರ ಭಾವನೆಗಳ ಜೊತೆ ಆಟವಾಡುತ್ತಿದೆ ಎಂದು ಶ್ರೇಯಸ್ ತಲ್ಪಾಡೆ ಬರೆದುಕೊಂಡಿದ್ದಾರೆ.
ಪ್ರತಿದಿನ ಶಾಲೆಗೆ ಹೋಗುವ ನನ್ನ ಪುಟ್ಟ ಮಗಳು ಈಗಾಗಲೇ ನನ್ನ ಯೋಗಕ್ಷೇಮದ ಬಗ್ಗೆ ಚಿಂತಿಸುತ್ತಾಳೆ. ನಿರಂತರವಾಗಿ ಪ್ರಶ್ನೆಗಳನ್ನು ಕೇಳುತ್ತಾಳೆ. ಈ ಸುಳ್ಳು ಸುದ್ದಿಯು ಅವಳ ಭಯವನ್ನು ಇನ್ನಷ್ಟು ಗಾಢವಾಗಿಸುತ್ತದೆ. ಅವಳ ಗೆಳೆಯರು ಮತ್ತು ಶಿಕ್ಷಕರಿಂದ ಹೆಚ್ಚಿನ ಪ್ರಶ್ನೆಗಳನ್ನು ಎದುರಿಸುವಂತೆ ಮಾಡಿದೆ. ಈ ಸಮಯದಲ್ಲಿ ನನ್ನಗೆ ಸಾಕಷ್ಟು ಜನರು ಫೋನ್ ಮಾಡಿ ಕೇಳಿದ್ದಕ್ಕೆ ತುಂಬಾ ಕೃತಜ್ಞನಾಗಿದ್ದೇನೆ. ನಿಮ್ಮ ಕಾಳಜಿ ಮತ್ತು ಪ್ರೀತಿ ನನಗೆ ಪ್ರಪಂಚವಾಗಿದೆ. ಟ್ರೋಲ್ ಮಾಡುವವರಿಗೆ ನನ್ನದೊಂದು ಸರಳ ವಿನಂತಿ. ದಯವಿಟ್ಟು ಇದನ್ನು ನಿಲ್ಲಿಸಿ. ಇತರರ ಜೀವಕ್ಕೆ ಹಾನಿಯಾಗುವ ಹಾಗೆ ಜೋಕ್ ಮಾಡಬೇಡಿ ಮತ್ತು ಬೇರೆ ಯಾರಿಗೂ ಇದನ್ನು ಮಾಡಬೇಡಿ ಎಂದು ನಟ ಕೇಳಿಕೊಂಡಿದ್ದಾರೆ. ಸದ್ಯ ‘ವೆಲ್ಕಮ್ ಟು ದಿ ಜಂಗಲ್’ ಎಂಬ ಸಿನಿಮಾದಲ್ಲಿ ಶ್ರೇಯಸ್ ತಲ್ಪಾಡೆ ಬ್ಯುಸಿಯಾಗಿದ್ದಾರೆ. ಕನ್ನಡದ ನಟಿ ರಾಧಿಕಾ ಕುಮಾರಸ್ವಾಮಿ ಜೊತೆ ‘ಅಜಾಗ್ರತ’ ಸಿನಿಮಾ ಮಾಡ್ತಿದ್ದಾರೆ. ಹಲವು ಸಿನಿಮಾಗಳು ಅವರ ಕೈಯಲ್ಲಿವೆ.