ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ದಸರೆಯ ಮೊದಲ ಕಾರ್ಯಕ್ರಮವಾದ ದಸರಾ ಗಜಪಯಣವು ಬುಧವಾರ ನಡೆಯಲಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹೆಬ್ಬಾಗಿಲಿನಲ್ಲಿ ಗಜಪಯಣ ಸಮಾರಂಭ ಇಂದು ಬೆಳಗ್ಗೆ 10.20 ರಿಂದ 10.45ರೊಳಗಿನ ಶುಭ ಮುಹೂರ್ತದಲ್ಲಿ ನಡೆಯಲಿದೆ. ದಸರಾ ಗಜಪಡೆಗೆ ಪುಷ್ಪಾರ್ಚನೆ ಮತ್ತು ಆರತಿ ಬೆಳಗಿ ಗಜಪಯಣಕ್ಕೆ ಚಾಲನೆ ನೀಡಲಾಗುತ್ತದೆ. ನಂತರ, 9 ಆನೆಗಳನ್ನು ಪ್ರತ್ಯೇಕ ಲಾರಿಗಳಲ್ಲಿ ಹತ್ತಿಸಿಕೊಂಡು ಮೈಸೂರಿಗೆ ಕರೆ ತರಲಾಗುತ್ತದೆ. ಆನೆಗಳೊಂದಿಗೆ ಮಾವುತರು, ಕಾವಾಡಿಗಳ ಕುಟುಂಬದವರು ಆಗಮಿಸಲಿದ್ದಾರೆ.
2024ರ ದಸರಾ ಗಜಪಡೆಗೆ ಅರಣ್ಯ ಇಲಾಖೆ 14 ಆನೆಗಳನ್ನು ಆಯ್ಕೆ ಮಾಡಿದ್ದು, ಮೊದಲ ತಂಡದಲ್ಲಿ 9 ಆನೆಗಳು, 2ನೇ ತಂಡದಲ್ಲಿ 5 ಆನೆಗಳು ನಾಡಿಗೆ ಬರಲಿವೆ. ಅಲ್ಲದೆ, 4 ಆನೆಗಳನ್ನು ಮೀಸಲಿರಿಸಲಾಗಿದೆ. ಮೊದಲ ತಂಡದಲ್ಲಿ ಅಂಬಾರಿ ಆನೆ ಅಭಿಮನ್ಯು, ಧನಂಜಯ, ಗೋಪಿ, ಭೀಮ, ಕಂಜನ್, ರೋಹಿತ್, ಏಕಲವ್ಯ (ಹೊಸ ಆನೆ), ವರಲಕ್ಷ್ಮಿ ಮತ್ತು ದೊಡ್ಡಹರವೆ ಲಕ್ಷ್ಮಿ ಆನೆಗಳು ಬರಲಿವೆ. 2ನೇ ತಂಡದಲ್ಲಿ ಪ್ರಶಾಂತ, ಮಹೇಂದ್ರ, ಸುಗ್ರೀವ, ಲಕ್ಷ್ಮಿ ಮತ್ತು ಹಿರಣ್ಯಾ ಆನೆಗಳು ಬರಲಿವೆ. ಹರ್ಷ, ಅಯ್ಯಪ್ಪ, ಪಾರ್ಥಸಾರಥಿ ಮತ್ತು ಮಾಲಾದೇವಿಗಳನ್ನು ಮೀಸಲು ಆನೆಗಳಾಗಿ ಆಯ್ಕೆ ಮಾಡಲಾಗಿದೆ.