ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಅಗತ್ಯವಿದ್ದರೆ ಕುಮಾರಸ್ವಾಮಿ ಅವರನ್ನು ಬಂಧಿಸುತ್ತೇವೆ ಎಂದು ಸಿಎಂ ಹೇಳಿಕೆ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಯಾವ ಸಿಎಂ ಕೂಡ ಇಂತಹ ಭಂಡತನವನ್ನು ಪ್ರದರ್ಶಿಸಿರಲಿಲ್ಲ ಎಂದು ಕಿಡಿಕಾರಿದ್ದಾರೆ.
ಹೆಚ್ಡಿ ಕುಮಾರಸ್ವಾಮಿಗೆ ಭಯ ಶುರುವಾಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನನಗೆ ಭಯ ಶುರುವಾಗಿದೆಯಾ, ನನ್ನ ನೋಡಿದ್ರೆ ಹಾಗೆ ಅನಿಸುತ್ತಾ? ಎಂದು ತಿರುಗೇಟು ನೀಡಿದ್ದಾರೆ. ಕಳೆದ ವಾರದಿಂದ ಮುಖ್ಯಮಂತ್ರಿ ಹೇಗೆ ನಡೆದುಕೊಂಡಿದ್ದಾರೆ ನೋಡಿದ್ದೀರಲ್ವಾ? ಇವರು ಏನು ಮಾಡಿದ್ದಾರೆ ಎಂದು ಜನರು ನೋಡಿದ್ದಾರೆ. ಮುಡಾ ಆಸ್ತಿಯನ್ನ ನನ್ನ ಆಸ್ತಿ ಅಂತ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.