ರಾಜ್ಯ ಸರ್ಕಾರವನ್ನು ಇನ್ನಾರು ತಿಂಗಳಲ್ಲಿ ಅಸ್ಥಿರಗೊಳಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೇಂದ್ರ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಭರವಸೆ ನೀಡಿ ಬಂದಿದ್ದಾರೆ. ಹೀಗಾಗಿಯೇ ಸರ್ಕಾರದ ವಿರುದ್ದ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಪ್ರಾಸಿಕ್ಯೂಷನ್ ಅನುಮತಿಯಂತಹ ಷಡ್ಯಂತ್ರ ನಡೆಸಲಾಗುತ್ತಿದೆ.
ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ್ದಾರೆ ಅಲ್ಲದೆ, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನಡೆಸಿದ ಹಗರಣಗಳನ್ನು ಬಯಲಿಗೆ ತಂದು ಅವುಗಳ ವಿರುದ್ಧ ತನಿಖೆ ನಡೆಸುವುದಾಗಿಯೂ ಮುಖ್ಯಮಂತ್ರಿಯವರು ಸಭೆಗೆ ತಿಳಿಸಿದರು ಎಂದು ಮೂಲಗಳು ಹೇಳಿವೆ. ರಾಜ್ಯದಲ್ಲಿ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ನನ್ನನ್ನು ಗುರಿಯಾಗಿಸಿಕೊಂಡು ಸರ್ಕಾರನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿವೆ. ಇದೆಲ್ಲದರ ಹಿಂದೆ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ನೇರ ಪಾತ್ರವಿದೆ.
ಅವರು ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ನಾವು ಅಸ್ಥಿರಗೊಳಿಸುತ್ತೇವೆ ಎಂದು ದೆಹಲಿಯಲ್ಲಿ ಅಮಿತ್ ಶಾ ಅವರಿಗೆ ಭರವಸೆ ನೀಡಿರುವುದೇ ಇದೆಲ್ಲದಕ್ಕೂ ಕಾರಣ. ಆದರೆ, ಅವರ ಕುತಂತ್ರ ಫಲಿಸುವುದಿಲ್ಲ ಎಂದಿದ್ದಾರೆ. ಮುಡಾ ಆಗಲಿ, ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣದಲ್ಲಾಗಲಿ ನನ್ನ ಎಳ್ಳಷ್ಟೂ ಪಾತ್ರವಿಲ್ಲ. ಮುಡಾ ಪ್ರಕರಣದಲ್ಲಿ ನನ್ನ ಬಾಮೈದನೂ ಸೇರಿದಂತೆ ಕುಟುಂಬದ ಯಾವುದೇ ಸದಸ್ಯರ ಹಸ್ತಕ್ಷೇಪವಿಲ್ಲ. ನನ್ನ ರಾಜಕೀಯ ಜೀವನಕ್ಕೆ ಕಪ್ಪುಚುಕ್ಕೆ ಇಡುವ ಹುನ್ನಾರ ಹಾಗೂ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ದುರುದ್ದೇಶದಿಂದ ಪ್ರತಿಪಕ್ಷಗಳು ಕುತಂತ್ರ ನಡೆಸಿವೆ. ಇದರ ವಿರುದ್ದ ಕಾನೂನು ಹೋರಾಟದ ಜೊತೆಗೆ ಬಿಜೆಪಿ ಹಾಗೂ ಜೆಡಿಎಸ್ ನವರ ಅಕ್ರಮಗಳನ್ನು ಹೊರಗೆಳೆದು ಜನರ ಮುಂದೆ ಇಡುವ ಮೂಲಕ ಅವರ ಕುತಂತ್ರ ಫಲಿಸದಂತೆ ಮಾಡಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದು ಸಿಎಂ ತಿಳಿಸಿದರು ಎಂದು ಮೂಲಗಳು ಹೇಳಿವೆ.
ರಾಜ್ಯಪಾಲರು ಖಾಸಗಿ ವ್ಯಕ್ತಿ ನೀಡಿದ ದೂರು ಆಧರಿಸಿ ವಿವೇಚನಾರಹಿತವಾಗಿ ತರಾತುರಿಯಲ್ಲಿ ಅನುಮತಿ ನೀಡಿದ್ದಾರೆ. ಆದರೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ ಲೋಕಾಯುಕ್ತ ಎಸ್ಐಟಿಯವರೇ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಕಳೆದ ನವೆಂಬರ್ನಲ್ಲೇ ಕೇಳಿದ್ದರೂ ಕೊಟ್ಟಿಲ್ಲ, ಅದೇ ರೀತಿ ಬಿಜೆಪಿಯ ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ ಜನಾರ್ದನ ರೆಡ್ಡಿ ಅವರ ವಿರುದ್ದವೂ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ದೂರುಗಳು ಬಂದಿದ್ದರೂ ಪರಿಗಣಿಸಿಲ್ಲ, ನನ್ನ ವಿರುದ್ಧ ಮಾತ್ರ ತರಾತುರಿಯಲ್ಲಿ ಕೇಂದ್ರ ಸರ್ಕಾರ, ಬಿಜೆಪಿಯವರ ಒತ್ತಡಕ್ಕೆ ಮಣಿದು ಅನುಮತಿ ನೀಡಿ ತಾರತಮ್ಯ ಎಸಗಿದ್ದಾರೆ. ಇದರ ವಿರುದ್ಧದ ಕಾನೂನು ಹೋರಾಟದಲ್ಲಿ ಜಯ ಸಿಗುವ ನಂಬಿಕೆ ಇದೆ ಎಂದು ತಿಳಿಸಿದರು ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.