ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅನುಮತಿ ನೀಡಿದ್ದಾರೆ. ರಾಜ್ಯಪಾಲರ ಈ ನಡೆಯನ್ನು ಖಂಡಿಸಿರುವ ಅಂಹಿಂದ ಸಮುದಾಯ ಮಂಗಳವಾರ ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಬೆಳಗ್ಗೆ 11 ಗಂಟೆಗೆ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದೆ. ಸಮಾವೇಶ ಬಳಿಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ರಾಜಭವನ ಚಲೋ ಕರೆ ನೀಡಿದೆ. ಇದರಿಂದ ಫ್ರೀಡಂ ಪಾರ್ಕ್ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಲಿದೆ. ಹೀಗಾಗಿ ಸುಗಮ ಸಂಚಾರಕ್ಕಾಗಿ ಬೆಂಗಳೂರು ಸಂಚಾರಿ ಪೊಲೀಸರು ಮಾರ್ಗಸೂಚಿ ಹೊರಡಿಸಿದ್ದಾರೆ.
ಅಹಿಂದ ನಾಯಕರ ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸುವ ಸಾಧ್ಯತೆ ಇದೆ. ಪ್ರತಿಭಟನೆಯಲ್ಲಿ ಶೋಷಿತ ಸಮುದಾಯದ ವಿದ್ಯಾರ್ಥಿಗಳ ಒಕ್ಕೂಟ, ಶೋಷಿತರ ಒಕ್ಕೂಟ, ಅಹಿಂದ ರಕ್ಷಣಾ ವೇದಿಕೆ, ರಾಜ್ಯ ಕುರುಬರ ಬಳಗ, ಅಂಬೇಡ್ಕರ್ ಅಭಿಮಾನಿಗಳ ಸಂಘಟನೆ ಸೇರಿದಂತೆ ಹಲವು ಸಂಘಟನೆ ಭಾಗಿಯಾಗಲಿವೆ. ಹೀಗಾಗಿ ಬೆಳಗ್ಗೆ 9.00 ರಿಂದ ಸಂಜೆ 4.00 ಗಂಟೆ ವರೆಗೆ ಫ್ರೀಡಂ ಪಾರ್ಕ್ ಸುತ್ತಮುತ್ತ ವಾಹನ ಸಂಚಾರ ಬಂದ್ ಇರಲಿದೆ.
ಬೆಂಗಳೂರು ನಗರ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಫ್ರೀಡಂ ಪಾರ್ಕ್ನಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ವತಿಯಿಂದ ಪ್ರತಿಭಟನೆ ಮತ್ತು ರಾಜಭವನ ಚಲೋ ನಡೆಸಲಿದೆ. ಈ ಪ್ರತಿಭಟನೆಗೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಪ್ರತಿಭಟನಾಕಾರರು ಮೈಸೂರು, ತುಮಕೂರು, ಕನಕಪುರ, ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆಗಳ ಕಡೆಗಳಿಂದ ಬರುತ್ತಿದ್ದಾರೆ. ಫ್ರೀಡಂ ಪಾರ್ಕ್ ಸುತ್ತಮುತ್ತ ಭಾರಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಈ ಪ್ರತಿಭಟನೆ ಸಮಯದಲ್ಲಿ ಈ ಕೆಳಕಂಡ ಸಂಚಾರ ಮಾರ್ಪಾಟು ಮಾಡಲಾಗಿದೆ.
- ಕೋಡೆ ಸರ್ಕಲ್ ನಿಂದ ಫ್ರೀಡಂ ಪಾರ್ಕ್ ಜಂಕ್ಷನ್ ವರೆಗೆ (ಶೇಷಾದ್ರಿ ರಸ್ತೆ) ವರೆಗೆ ಭಾರಿ ಸಂಚಾರ ದಟ್ಟಣೆ ಉಂಟಾಗುವುದರಿಂದ ಪರ್ಯಾಯ ಮಾರ್ಗವನ್ನು ಸಾರ್ವಜನಿಕರು ಬಳಸಬೇಕು.
- ಇಂದು ಕೆ.ಪಿ.ಎಸ್.ಸಿ ಪರೀಕ್ಷೆ ಇರುವುದರಿಂದ, ಪರಿಕ್ಷಾರ್ತಿಗಳು ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ತಲುಪಬೇಕು.
- ಪ್ರತಿಭಟನೆಗೆ ಬರುವ ಬಸ್ಸುಗಳು ಮೇಘ್ರವೃತ್ತದ ಬಳಿಯ ಅರಮನೆ ಮೈದಾನದ ಗೇಟ್ ನಂ. 1, 2 ಮತ್ತು 3 ರಲ್ಲಿ ನಿಲುಗಡೆ ಮಾಡಬೇಕು ಎಂದು ಸಚಿಸಲಾಗಿದೆ.
- ಪ್ರತಿಭಟನೆಗೆ ಬರುವ ಕಾರು. ದ್ವಿಚಕ್ರ ವಾಹನಗಳನ್ನು ಫ್ರೀಡಂ ಪಾರ್ಕ್ನಲ್ಲಿರುವ ಎಂಎಲ್ಸಿಪಿ ಪಾರ್ಕಿಂಗ್ ಜಾಗದಲ್ಲಿ ಪಾವತಿ ಆಧಾರದ ಮೇಲೆ ನಿಲ್ಲಿಸಬೇಕು ಎಂದು ಸೂಚಿಸಿದ್ದಾರೆ.