ರಾಜ್ಯದ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ್ ಬೊಮ್ಮಾಯಿ ತನ್ನ ಬಗ್ಗೆ ಆಕ್ಷೇಪಾರ್ಹವಾದ ಹೇಳಿಕೆ/ಸುದ್ದಿ ಪ್ರಕಟಿಸದಂತೆ ವಕೀಲ ಕೆ ಎನ್ ಜಗದೀಶ್ ಮತ್ತು ಮಾಧ್ಯಮ ಸಂಸ್ಥೆಗಳ ವಿರುದ್ಧ ಪ್ರತಿಬಂಧಕಾದೇಶ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅರ್ಜಿ ವಿಚಾರಣೆ ನಡೆಸಿರುವ ಬೆಂಗಳೂರಿನ ಸತ್ರ ನ್ಯಾಯಾಲಯ ಇಂದಿಗೆ ಆದೇಶ ಕಾಯ್ದಿರಿಸಿದೆ ಎಂದು ಬಾರ್ &ಬೆಂಚ್ ವರದಿ ಮಾಡಿದೆ.
ಪ್ರಸ್ತುತ ಹಾವೇರಿ ಸಂಸದರಾಗಿರುವ ಬಸವರಾಜ ಬೊಮ್ಮಾಯಿ ಸಲ್ಲಿಸಿರುವ ಮೂಲ ದಾವೆಯ ಭಾಗವಾಗಿ ಸಲ್ಲಿಕೆಯಾಗಿರುವ ಮಧ್ಯಂತರ ಅರ್ಜಿಯ ವಿಚಾರಣೆಯನ್ನು 8ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ವಾಣಿ ಎ. ಶೆಟ್ಟಿ ಅವರು ನಡೆಸಿದ್ದಾರೆ ಎಂದು ವರದಿ ತಿಳಿಸಿದೆ. ಬೊಮ್ಮಾಯಿಯವರ ಮಧ್ಯಂತರ ಅರ್ಜಿಯ ಕುರಿತು ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರ ವಾದವನ್ನು ನ್ಯಾಯಾಲಯ ಆಲಿಸಿದೆ. ವಕೀಲರು ಸಂಬಂಧಿತ ದಾಖಲೆಗಳ ಮೆಮೊವನ್ನು ಸಲ್ಲಿಸಿದ್ದಾರೆ. ಆಗಸ್ಟ್ 28ರಂದು ಆದೇಶ ಮಾಡಲಾಗುವುದು” ಎಂದು ನ್ಯಾಯಾಲಯ ಹೇಳಿದೆ.
ಬಸವರಾಜ ಬೊಮ್ಮಾಯಿ ಅವರ ಆಪ್ತ ಸಹಾಯಕ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಪೊಲೀಸರು ತನ್ನನ್ನು ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ ಎಂದು ವಕೀಲ ಜಗದೀಶ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅವರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ವರದಿ ತಿಳಿಸಿದೆ.